ಹೆಲಿಕಾಪ್ಟರ್ ಅಪಘಾತ ತೀವ್ರತೆಯಿಂದಾಗಿ ಮೃತದೇಹಗಳನ್ನು ಗುರುತಿಸುವುದೂ ಕಷ್ಟಕರ: ವಾಯುಪಡೆ

ಹೊಸದಿಲ್ಲಿ,ಡಿ.9: ಸಿಡಿಎಸ್ ಜನರಲ್ ಬಿಪಿನ್ ರಾವತ್,ಅವರ ಪತ್ನಿ ಮತ್ತು ಇತರ 11 ಜನರು ಮೃತಪಟ್ಟ ಹೆಲಿಕಾಪ್ಟರ್ ದುರಂತದ ತೀವ್ರತೆಯಿಂದಾಗಿ ಶವಗಳ ಗುರುತು ಪತ್ತೆ ಮಾಡುವುದು ಕಷ್ಟವಾಗುತ್ತಿದೆ ಎಂದು ಭಾರತೀಯ ವಾಯುಪಡೆಯು ಗುರುವಾರ ತಿಳಿಸಿದೆ.
ಮೃತರ ಪ್ರೀತಿಪಾತ್ರರ ಭಾವನೆಗಳು ಮತ್ತು ಸಂವೇದನೆಗಳನ್ನು ಪರಿಗಣಿಸಿ ಶವಗಳ ಗುರುತು ಪತ್ತೆ ಹಚ್ಚಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಸರಕಾರದ ಮೂಲಗಳು ತಿಳಿಸಿದವು.
ಜ.ರಾವತ್,ಅವರ ಪತ್ನಿ ಮಧುಲಿಕಾ ರಾವತ್,ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಸೇರಿದಂತೆ ಕೇವಲ ನಾಲ್ವರ ಶವಗಳನ್ನು ಗುರುತಿಸಲು ಸಾಧ್ಯವಾಗಿದೆ. ಮೃತರ ಕುಟುಂಬ ಸದಸ್ಯರು ದಿಲ್ಲಿಗೆ ಆಗಮಿಸುತ್ತಿದ್ದು,ತಮ್ಮವರ ಶವಗಳನ್ನು ಗುರುತಿಸುವಂತೆ ಅವರನ್ನು ಕೋರಿಕೊಳ್ಳಲಾಗುವುದು. ವೈಜ್ಞಾನಿಕ ಕ್ರಮಗಳ ಜೊತೆಗೆ ಕುಟುಂಬ ಸದಸ್ಯರ ನೆರವನ್ನೂ ಶವಗಳ ಗುರುತು ಪಚ್ಚೆ ಹತ್ತಲು ಪಡೆಯಲಾಗುವುದು. ಗುರುತು ಪತ್ತೆಯಾದ ನಂತರವೇ ಶವಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಈ ಮೂಲಗಳು ಹೇಳಿದವು.
ಗುರುತು ಪತ್ತೆ ಹಚ್ಚುವಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರಗಳು ನಡೆಯಲಿವೆ. ಪ್ರತಿಕೂಲ ಹವಾಮಾನದಿಂದಾಗಿ ವೈಮಾನಿಕ ಕಾರ್ಯಾಚರಣೆಯ ಬದಲು ಎಲ್ಲ 13 ಶವಗಳನ್ನು ರಸ್ತೆ ಮೂಲಕ ವೆಲಿಂಗ್ಟನ್‌ನಿಂದ ಸೂಲೂರಿಗೆ ಸಾಗಿಸಿದ ಬಳಿಕ ವಾಯುಪಡೆಯ ಸಿ-1301ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದ ಮೂಲಕ ದಿಲ್ಲಿಗೆ ತರಲಾಗಿದೆ ಎಂದು ಅವು ತಿಳಿಸಿದವು. ಜ.ರಾವತ್ ಅವರ ಅಂತ್ಯಸಂಸ್ಕಾರವು ಶುಕ್ರವಾರ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ದಿಲ್ಲಿಯಲ್ಲಿ ನಡೆಯಲಿದೆ.