‘ಇನಾಂ ಅಬಾಲಿಶನ್ ಕಾನೂನು' (ತಿದ್ದುಪಡಿ) ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ?

ಬೆಂಗಳೂರು, ಡಿ. 9: ‘ಕರ್ನಾಟಕ ಕೆಲವು ಇನಾಂ ಅಬಾಲಿಶನ್ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ-2021'ಕ್ಕೆ ಹಾಗೂ ಸಂಬಂಧಿಸಿದ ಇತರೆ ನಿಯಮಗಳಿಗೆ ತಿದ್ದುಪಡಿ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಗೊತ್ತಾಗಿದೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜರುಗಿದ ಸಂಪುಟ ಸಭೆಯಲ್ಲಿ, ತಲೆಮಾರುಗಳಿಂದ ‘ಇನಾಂ ಭೂಮಿ' ಉಳುಮೆ ಮಾಡುತ್ತಿದ್ದ ರೈತರು ಮತ್ತು ಎಸ್ಸಿ-ಎಸ್ಟಿ ವರ್ಗದ ಜನರಿಗೆ ಸ್ಪಂದಿಸಲು ಮುಂದಾಗಿರುವ ರಾಜ್ಯ ಸರಕಾರ, ಇನಾಂ ಭೂಮಿ ಮರು ಮಂಜೂರು ವಂಚಿತರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಡಿ.13ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉದ್ದೇಶಿತ ಮಸೂದೆ ಮಂಡಿಸಲು ನಿರ್ಧರಿಸಿದ್ದು, ಉಭಯ ಸದನಗಳಲ್ಲಿ ಒಪ್ಪಿಗೆ ಬಳಿಕ ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಿದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ದಿನದಿಂದ ಒಂದು ವರ್ಷದವರೆಗೆ ಇನಾಂ ಭೂಮಿ ಸಾಗುವಳಿ ಮಾಡುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಇನಾಂ ಭೂಮಿ ಮಂಜೂರಿಗೆ ಅರ್ಜಿ ಕರೆಯಲಾಗಿತ್ತು. ಆದರೆ, ಬಹುತೇಕ ರೈತರು ಹಾಗೂ ಉಳುಮೆದಾರರು ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 30 ಸಾವಿರ ಎಕರೆ ಇನಾಂ ಭೂಮಿಯಿದೆ. ಕಾಯ್ದೆಗೆ ತಿದ್ದುಪಡಿಯಿಂದ ಒಟ್ಟು 1 ಲಕ್ಷ ಎಕರೆಯಲ್ಲಿ ಉಳುಮೆದಾರರಿಗೆ ಅನುಕೂಲವಾಗುವ ಅಂದಾಜು ಮಾಡಲಾಗಿದೆ.
ಸಂಪುಟದ ಇತರೆ ನಿರ್ಣಯಗಳು: ‘2022-23ನೆ ಶೈಕ್ಷಣಿಕ ಸಾಲಿಗೆ ‘ವಿದ್ಯಾ ವಿಕಾಸ ಯೋಜನೆ'ಯಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 152.87ಕೋಟಿ ರೂ.ವೆಚ್ಚದಲ್ಲಿ ಉಚಿತ ಪಠ್ಯ ಪುಸ್ತಕಗಳನ್ನು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲು ಅನುಮೋದನೆ ದೊರೆತಿದೆ' ಎಂದು ಮೂಲಗಳು ತಿಳಿಸಿವೆ.
‘ಕೃಷಿ ವಿಜ್ಞಾನಗಳ ವಿವಿ (ತಿದ್ದುಪಡಿ) ವಿಧೇಯಕ-2021ಕ್ಕೆ, ಕರ್ನಾಟಕ ರಾಜ್ಯ ಆಯುಷ್ ವಿಶ್ವ ವಿದ್ಯಾಲಯ ವಿಧೇಯಕ-2021ಕ್ಕೆ ತಿದ್ದುಪಡಿ ಮತ್ತು ನಿಬಂಧನೆ ಸೇರ್ಪಡೆ, ಕರ್ನಾಟಕ ಮಹಾನಗರಪಾಲಿಕೆಗಳು ಮತ್ತು ಇತರೆ ಕಾನೂನು (ಮೂರನೇ ತಿದ್ದುಪಡಿ) ವಿಧೇಯಕ-2021 ಹಾಗೂ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ-2021ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ' ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಚಿವ ಸಂಪುಟ ಸಭೆಗೆ ಪೂರ್ವನಿಗದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಈ ಬಗ್ಗೆ ನನಗೆ ಮಾಹಿತಿ ನೀಡಿದ್ದರು. ಆದರೆ, ಕೋವಿಡ್ ರೂಪಾಂತರ ಒಮೈಕ್ರಾನ್ ಸೋಂಕು ನಿಯಂತ್ರಣ ಮಾರ್ಗಸೂಚಿ ಸಂಬಂಧ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ







