ದಲಿತ ಮುಖಂಡರ ಒಗ್ಗೂಡುವಿಕೆಗಾಗಿ ಫೆ.15 ರಿಂದ ಎರಡು ದಿನಗಳ ಸಮಾವೇಶ
ಬೆಂಗಳೂರು, ಡಿ.9: ಮುಂಬರುವ 2022ರ ಫೆ.15 ಮತ್ತು 16ರಂದು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಸರ್ವ ಸದಸ್ಯರ ಸಮಾವೇಶ ಸಭೆಯನ್ನು ನಡೆಸಲಾಗುವುದು ಎಂದು ಸಮಿತಿಯ ರಾಜ್ಯ ಸಂಚಾಲಕ ವಿ. ಸೋಮಶೇಖರ್ ತಿಳಿಸಿದ್ದಾರೆ.
ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಪ್ರೊ. ಬಿ.ಕೃಷ್ಣಪ್ಪ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು 1970ರ ದಶಕದಲ್ಲಿ ಆರಂಭ ಮಾಡಲಾಯಿತು. ಆದರೆ ಅವರು ನಿಧನದ ನಂತರ ಸಮಿತಿಯು ಪತನದ ಹಾದಿ ಹಿಡಿಯಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಹೊರಬಂದ ಸಮಿತಿಯ ಕೆಲ ನಾಯಕರು ಸಮಿತಿಯ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಇದರಿಂದ ನ್ಯಾಯಲಯದ ಮೆಟ್ಟಿಲು ಹತ್ತಬೇಕಾಯಿತು. ಆದರೆ ಇಂದು ಭಿನ್ನಾಭಿಪ್ರಾಯದಿಂದ ಹೊರಗುಳಿದ ಸಮಿತಿಯ ಮೂಲ ಮುಖಂಡರು ಒಗ್ಗೂಡಿದ್ದು, ದಲಿತ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಕಳೆದ ನ.15ರಂದು ಕರ್ನಾಟಕ ದಲಿತ ಚಳುವಳಿಯ ಐಕ್ಯತಾ ಸಮಾವೇಶವನ್ನು ಆಯೋಜಿಸಿಲಾಗಿದೆ. ಅದರ ಮುಂದುವರೆದ ಭಾಗವಾಗಿ ಬರುವ ಫೆ.15 ಮತ್ತು 16ರಂದು ರಾಜ್ಯ ಮಟ್ಟದ ಸರ್ವ ಸದಸ್ಯರ ಸಮಾವೇಶ ಸಭೆಯನ್ನು ನಡೆಸಿ, ನೂತನವಾಗಿ ರಾಜ್ಯ ಸಮಿತಿಯನ್ನು ರಚಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಎಂ. ಗುರುಮೂರ್ತಿ, ಅಂದಾನಿ ಸೋಮನಹಳ್ಳಿ, ಗಂಗಾಧರ ಚಿಕ್ಕಬಳ್ಳಾಪುರ, ಹನುಮಂತಪ್ಪ ಕಾಶರಗಲ್, ಫಕೀರಪ್ಪ ಮುಂಡಗೋಡು, ದೇವದಾಸ, ನಾರಾಯಣಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







