ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ: ರೈತರಿಗೆ ಅವಕಾಶ
ಉಡುಪಿ, ಡಿ.9: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ರೈತರಿಗೆ ಅವಕಾಶ ನೀಡಲಾಗಿದ್ದು, ಮೊಬೈಲ್ ಆ್ಯಪ್‌ನ ಮೂಲಕ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಫಾರ್ಮರ್ಸ್ ರಬಿ ಕ್ರಾಪ್ ಸರ್ವೇ ಕರ್ನಾಟಕ-2021-22’ (Farmer Rabi Crop Survey Karnataka) ಆ್ಯಪ್‌ನ್ನು ಡೌನ್‌ಲೋಡ್ ಮಾಡಿ, ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸಿ, ಆಧಾರ್‌ನ ಕ್ಯೂಆರ್ ಕೋಡ್‌ನ್ನು ಸ್ಕಾನ್ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್‌ಗೆ ಓಟಿಪಿ ಬರಲಿದ್ದು, ಓಟಿಪಿಯನ್ನು ದಾಖಲಿಸಿ, ಸಲ್ಲಿಸಬೇಕು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ, ಮಾಲಕನ ಹೆಸರು ಆಯ್ಕೆ ಮಾಡಿ, ಕ್ಷೇತ್ರ ನಮೂದಿಸಿ, ಸರ್ವೆ ನಂಬರ್‌ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.
ಬೆಳೆ ಸಮೀಕ್ಷೆ ಮಾಹಿತಿಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುತ್ತದೆ.
ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸಲು ಸರಕಾರದಿಂದ ಅವಕಾಶ ಕಲ್ಪಿಸಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಹಾಗೂ ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆ್ಯಪ್‌ನಲ್ಲಿ ಜಮೀನಿನ ಸರ್ವೆ ನಂಬರ್ ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಹಿಂಗಾರು-2021ರ ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







