ಕಬ್ಬನ್ಪಾರ್ಕ್ನಲ್ಲಿ ನಾಯಿ ಕಾಟ ತಡೆಗೆ ಕ್ರಿಯಾ ಯೋಜನೆ ರೂಪಿಸಿ: ಹೈಕೋರ್ಟ್ ನಿರ್ದೇಶನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಡಿ.9: ಕಬ್ಬನ್ ಪಾರ್ಕ್ ಒಳಗಡೆ ನಾಯಿಗಳ ಕಾಟ ತಡೆಯುವ ಸಂಬಂಧ ಕ್ರಿಯಾ ಯೋಜನೆಯೊಂದನ್ನು ರೂಪಿಸಲು ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ.
ಕಬ್ಬನ್ಪಾರ್ಕ್ನಲ್ಲಿ ಬೀದಿನಾಯಿಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಕಬ್ಬನ್ ಪಾರ್ಕ್ ಒಳಗೆ ನಾಯಿಗಳನ್ನು ಬಿಡುತ್ತಿರುವುದರಿಂದ ಜನ ಪಾರ್ಕ್ ಒಳಗೆ ಓಡಾಡಲು ಕಷ್ಟವಾಗುತ್ತಿದೆ. ಬೀದಿ ನಾಯಿಗಳು ಪಾರ್ಕ್ ಪ್ರವೇಶ ಮಾಡುತ್ತಿವೆ. ಜನರು ನಾಯಿಗಳಿಗೆ ಆಹಾರ ತಂದು ಹಾಕುತ್ತಾರೆ.
ಇದರಿಂದ ಊಟ ಇಲ್ಲದಾಗ ಆ ನಾಯಿಗಳು ಫಿರೋಸಿಯೆಸ್ ಆಗುತ್ತವೆ. ಇದು ಅಪಾಯಕಾರಿ. ಇನ್ನೂ ಸಾಕು ನಾಯಿಗಳನ್ನು ಮಾಲಕರು ಕರೆತರುತ್ತಾರೆ. ಅವುಗಳು ಪಾರ್ಕ್ ಒಳಭಾಗದಲ್ಲಿಯೇ ಮಲ ವಿಸರ್ಜನೆ ಮಾಡುತ್ತಿವೆ.
ಇದರಿಂದ ಪಾರ್ಕ್ ನಲ್ಲಿ ಸಂಚರಿಸಲು ಜನರಿಗೆ ಕಷ್ಟವಾಗುತ್ತಿದೆ. ಹೀಗಾಗಿ, ಬಿಬಿಎಂಪಿ ಪಾರ್ಕ್ ಒಳಗೆ ನಾಯಿಗಳಿಗೆ ಅವಕಾಶ ಮಾಡಿಕೊಡುತ್ತಿರುವುದನ್ನು ತಡೆಯಲು ಸಮಗ್ರವಾದ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬಿಬಿಎಂಪಿ ಕ್ರಮ ಕೈಗೊಳ್ಳದಿದ್ದರೇ, ನ್ಯಾಯಾಲಯವೇ ಕಾಗ್ನಿಜೆನ್ಸ್ ತೆಗೆದುಕೊಂಡು ನೋಟಿಸ್ ಜಾರಿ ಮಾಡುತ್ತದೆ ಎಂದು ಬಿಬಿಎಂಪಿಗೆ ಸೂಚನೆ ನೀಡಿತು.
ನಾಯಿಗಳು ಕಬ್ಬನ್ಪಾರ್ಕ್ನಲ್ಲಿ ಮುಕ್ತವಾಗಿ ಸಂಚರಿಸುತ್ತಿರುವುದರಿಂದ ಜನರಿಗೆ ಓಡಾಡಲು, ಮಕ್ಕಳು ಆಟವಾಡಲು ಕಷ್ಟವಾಗುತ್ತಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಮಾಲಕರೇ ಶುಚಿಗೊಳಿಸುತ್ತಾರೆ: ವಿದೇಶಗಳಲ್ಲಿ ನಾಯಿಗಳ ಮಲವನ್ನು ಮಾಲಕರೇ ಶುಚಿಗೊಳಿಸುತ್ತಾರೆ. ಆದರೆ ಇಲ್ಲಿ ವಿದ್ಯಾವಂತರೇ ನಾಯಿಗಳನ್ನು ಮಲವಿಸರ್ಜನೆಗೆ ಕರೆತರುತ್ತಾರೆ. ಇದನ್ನು ತಡೆಯಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅಭಿಪ್ರಾಯಪಟ್ಟರು.







