ದಮನಿತ ಪ್ರಜಾಸತ್ತಾತ್ಮಕ ಮೌಲ್ಯಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ: ವರದಿ

ಸಾಂದರ್ಭಿಕ ಚಿತ್ರ:PTI
ಜೊಹಾನ್ಸ್ಬರ್ಗ್ , ಡಿ.9: ಜಾಗತಿಕ ನಾಗರಿಕ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ದಮನಿತ ಪ್ರಜಾಸತ್ತಾತ್ಮಕ ಮೌಲ್ಯಗಳಿರುವ ದೇಶಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ ಎಂದು ದಕ್ಷಿಣ ಆಫ್ರಿಕಾದ ಸ್ವಯಂಸೇವಾ ಸಂಘಟನೆ ‘ಸಿವಿಕ್ಯುಸ್’ನ ವರದಿ ಹೇಳಿದೆ.
ಸಮೀಕ್ಷೆಯಲ್ಲಿ ಒಳಗೊಂಡ 110 ದೇಶಗಳಲ್ಲಿ ಭಾರತ ಸಹಿತ 37 ದೇಶಗಳಲ್ಲಿ ಮುಕ್ತ ಮತ್ತು ನಿರ್ಬಂಧಿತ ಪ್ರಜಾಪ್ರಭುತ್ವದ ತಳಹದಿಯಾಗಿರುವ ನಾಗರಿಕ ಹಕ್ಕುಗಳನ್ನು ನಿರಂತರವಾಗಿ ನಿಯಂತ್ರಿಸಲಾಗಿದೆ (2021ರಲ್ಲಿ) ಎಂದು ವರದಿ ಹೇಳಿದೆ. ಪ್ರತಿಭಟನಾಕಾರರ ಮತ್ತು ಪತ್ರಕರ್ತರ ಬಂಧನ ಮುಂತಾದ ಅಂಶಗಳನ್ನು ಪರಿಗಣಿಸಲಾಗಿದ್ದು, ದೇಶಗಳನ್ನು 5 ಪಟ್ಟಿಯಲ್ಲಿ ವರ್ಗೀಕರಿಸಲಾಗಿದೆ. ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವಿರುವ ಮುಕ್ತ ದೇಶಗಳು, ದಮನಿತ ಮತ್ತು ಹಲವು ನಿರ್ಬಂಧಗಳಿರುವ ದೇಶಗಳು ಎಂದು ಗುರುತಿಸಲಾಗಿದೆ.
ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆ ಅಥವಾ ‘ಯುಎಪಿಎ’ ಯನ್ನು, ಆಧಾರವಿಲ್ಲದ ಆರೋಪದಡಿ ಬಂಧನದಲ್ಲಿರಿಸಿ, ಜಾಮೀನು ನಿರಾಕರಿಸಲು ಪ್ರಧಾನಿ ನರೇಂದ್ರ ಮೋದಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಹೋರಾಟಗಾರರಾದ ಸುಧಾ ಭಾರದ್ವಾಜ್, ಸ್ಟ್ಯಾನ್ ಸ್ವಾಮಿ ಮುಂತಾದವರ ಬಂಧನವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ತನಿಖಾ ದಳದ ಅವಿರತ ಪ್ರಯತ್ನದ ಹೊರತಾಗಿಯೂ ಸುಧಾ ಭಾರದ್ವಾಜ್ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದ್ದರೆ, ಹಲವು ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದ ಸ್ವಾಮಿ ಜೈಲಿನಲ್ಲಿದ್ದಾಗಲೇ ಮೃತಪಟ್ಟಿದ್ದರು.
ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿರುವ ಕರ್ಫ್ಯೂ ಹಾಗೂ ಇತರ ನಿರ್ಬಂಧಗಳನ್ನೂ ವರದಿ ಉಲ್ಲೇಖಿಸಿದೆ. ಮಾನವ ಹಕ್ಕು ಪ್ರತಿಪಾದಕರ ಮನೆ ಹಾಗೂ ಕಚೇರಿಗಳ ಮೇಲೆ , ನಾಗರಿಕ ಹಕ್ಕುಗಳಿಗೆ ಹೋರಾಟ ನಡೆಸುವ ಸಂಸ್ಥೆಗಳ ಮೇಲೆ, ಮಾಧ್ಯಮ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಸಲಾಗಿದೆ ಎಂದು ವರದಿ ಹೇಳಿದೆ.
ಭಾರತ ಹಾಗೂ ಇತರ 13 ದೇಶಗಳಲ್ಲಿರುವ ಸಮಸ್ಯೆಯ ಬಗ್ಗೆ ವ್ಯಾಖ್ಯಾನಿಸಿದ, ಸರಕಾರದ ವಿರುದ್ಧ ಟೀಕೆ ನಡೆಸಿದವರನ್ನು ಕಾನೂನೇತರ ಕ್ರಮಗಳ ಮೂಲಕ ಬಾಯಿಮುಚ್ಚಿಸಲಾಗಿದೆ ಎಂದು ವರದಿ ಹೇಳಿದೆ. ಪ್ರಜಾಪ್ರಭುತ್ವ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಪ್ರಕ್ರಿಯೆಗಳನ್ನು ನಿಗ್ರಹಿಸುವಂತೆ ದೇಶಗಳಿಗೆ ಸಲಹೆ ನೀಡಲಾಗಿದೆ. ಅಂತರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು ಮಾನದಂಡಗಳನ್ನು ಅನುಸರಿಸಬೇಕು , ಮಾನವ ಹಕ್ಕುಗಳ ರಕ್ಷಕರು, ಪತ್ರಕರ್ತರು, ಕಾರ್ಯಕರ್ತರಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ವರದಿ ದೇಶಗಳಿಗೆ ಸಲಹೆ ನೀಡಿದೆ.
ರೈತರ ಚಳವಳಿಯ ಉಲ್ಲೇಖ
ಭಾರತದಲ್ಲಿ 3 ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ರೈತರು ನಡೆಸಿದ್ದ ಪ್ರತಿಭಟನೆಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೃಷಿ ಕಾಯ್ದೆಯನ್ನು ವಿರೋಧಿಸಿ ಸುಮಾರು 1 ವರ್ಷ ನಡೆದ ರೈತರ ಪ್ರತಿಭಟನೆಯನ್ನು ಭಾರತ ಸರಕಾರ ಅವಮಾನಿಸಿ ದಮನಿಸುವ ಪ್ರಯತ್ನ ನಡೆಸಿದೆ. ಪ್ರತಿಭಟನಕಾರರನ್ನು ತಡೆಯಲು ಅಧಿಕಾರಿಗಳು ರಸ್ತೆಯಲ್ಲಿ ತಡೆ ನಿರ್ಮಿಸಿದರು, ಹೆಚ್ಚಿನ ಬಲಪ್ರಯೋಗಿಸಿ ನೂರಾರು ಜನರನ್ನು ನಿರಂಕುಶವಾಗಿ ಬಂಧನದಲ್ಲಿರಿಸಿತು ಎಂದು ವರದಿ ಹೇಳಿದೆ.







