ಇವರ ಬೌದ್ಧಿಕ ಮಟ್ಟ ಕುಸಿಯುತ್ತಿರುವುದೇಕೆ?
ಮಾನ್ಯರೇ,
ಕನ್ನಡದ ಸುದ್ದಿವಾಹಿನಿಯೊಂದು, ಸ್ಯಾಂಡಲ್‌ವುಡ್ ನಟಿಯ ಕುರಿತು ಸುದ್ದಿ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಆತುರದ ವೀಕ್ಷಕರನ್ನು ಪಡೆಯುವುದಕ್ಕೆ ಸುದ್ದಿ ಅಲ್ಲದ ವಿಷಯಗಳನ್ನು ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಿಸುವುದನ್ನು ನೋಡುವಾಗ ಇಂತಹ ವಾಹಿನಿಗಳ ಪತ್ರಕರ್ತರ ಬೌದ್ಧಿಕ ಮಟ್ಟ ಎಷ್ಟರ ಮಟ್ಟಿಗೆ ಕುಸಿಯುತ್ತಿದೆ ಎನ್ನುವುದು ಕಾಣುತ್ತಿದೆ. ಸಾಮಾನ್ಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ವಿವೇಚನೆಯು ಪತ್ರಕರ್ತನಿಗೆ ಎಚ್ಚರವಾಗಿರಬೇಕು, ಜೀವಂತವಾಗಿರಬೇಕು. ಸುದ್ದಿ ಎಂದಿಗೂ ಶೋಕಿ ಅಲ್ಲ. ಮಾಡುವ ಸುದ್ದಿಯಲ್ಲಿ ಜನರ ಹಿತವನ್ನು ಬಯಸಬೇಕು.
ಇಂತಹ ನಿರುಪಯೋಗಿ ಸುದ್ದಿಗಳನ್ನು ಬಿತ್ತರಿಸುವುದನ್ನು ಬಿಟ್ಟು ಈಗಿನ ನಿರುದ್ಯೋಗ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲಿ. ಈಗ ಕೊರೋನ ಸಾಂಕ್ರಾಮಿಕವು ಹಲವು ಜೀವಗಳ ಜೊತೆಗೆ, ಹೆಚ್ಚಿನ ಜನರ ಜೀವನಾಧಾರವಾದ ಉದ್ಯೋಗವನ್ನೂ ನುಂಗಿದೆ. ಮಧ್ಯಮ ವರ್ಗದ ಜನರ ಜೀವನದ ಪರಿಸ್ಥಿತಿ ಹದಗೆಟ್ಟಿದೆ. ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಗಗನಕ್ಕೇರಿದ್ದು, ಬಡಜನರ ಸಾಲ ಬಾಧೆ ಹೆಚ್ಚುತ್ತಿದೆ. ಇಂತಹ ಜನರ ಸುಧಾರಿತ ಜೀವನಕ್ಕಾಗಿ ಮಾಡಬಹುದಾದ ಕೆಲಸಗಳೇನು ಎಂಬುದನ್ನು ವಾಹಿನಿಗಳು ಸರಕಾರದ ಮುಂದಿಡಲಿ.
ಇನ್ನು, ಎಲ್ಲಾ ಮೊಬೈಲ್ ನೆಟ್‌ವರ್ಕ್ ಸಂಸ್ಥೆಗಳು ಬೆಲೆಯನ್ನು ಹೆಚ್ಚಿಸಿವೆ. ರೂ.35ಕ್ಕೆ ರೀಚಾರ್ಜ್ ಮಾಡಿಸುತ್ತಿದ್ದವರು, ಈಗ ರೂ. 100 ಮಾಡಬೇಕಾದ ಸ್ಥಿತಿ ಎದುರಾಗಿದೆ. ಇಂತಹ ಹಲವು ಸಮಸ್ಯೆಗಳು ನಮ್ಮ ನಡುವೆ ಇವೆ. ಇಂತಹವುಗಳ ಬಗ್ಗೆ ಸುದ್ದಿ ಮಾಡಲಿ.
ನೆನಪಿರಲಿ ಖಾದ್ರಿ ಶಾಮಣ್ಣ, ಲಂಕೇಶ್, ವೈಯನ್ಕೆ, ಜಿ.ಎನ್.ರಂಗನಾಥ್ ರಾವ್‌ರಂತಹ ಮಹಾನ್ ಪತ್ರಕರ್ತರು ಜನರ ಪರವಾಗಿ ಪತ್ರಿಕೋದ್ಯಮವನ್ನು ನಡೆಸಿದ್ದವರು. ಜನರ ಪರವಾಗಿ, ಶೋಷಿತರ ದನಿಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುವುದು ಇಂದಿನ ತುರ್ತು ಅಗತ್ಯ.
ಶಿವಕುಮಾರ ಎಂ. ಹೊಸಹಳ್ಳಿ







