ದಕ್ಷಿಣ ಸುಡಾನ್ ನ ಹಿಂಸಾಚಾರ ಯುದ್ಧಾಪರಾಧಕ್ಕೆ ಸಮ: ಆ್ಯಮ್ನೆಸ್ಟಿ ಇಂಟರ್ನ್ಯಾಷಲ್

ಸಾಂದರ್ಭಿಕ ಚಿತ್ರ
ಲಂಡನ್, ಡಿ.9: ದಕ್ಷಿಣ ಸುಡಾನ್ನಲ್ಲಿ ಸರಕಾರಿ ಪರ ಮತ್ತು ವಿಪಕ್ಷದ ಪರವಾಗಿರುವ ಸಶಸ್ತ್ರ ಪಡೆಗಳ ನಡುವಿನ ಘರ್ಷಣೆ ಈ ವರ್ಷ ಉಲ್ಬಣಗೊಂಡಿದ್ದು ಹಲವಾರು ನಾಗರಿಕರು ಮೃತಪಟ್ಟಿದ್ದಾರೆ. ಈ ಘರ್ಷಣೆಯ ಫಲವಾಗಿರುವ ಊಹಿಸಲಾಗದ ಹಿಂಸಾಚಾರ ಯುದ್ಧಾಪರಾಧಕ್ಕೆ ಸಮವಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷಲ್ ಹೇಳಿದೆ.
ಜೂನ್ನಿಂದ ಅಕ್ಟೋಬರ್ ನಡುವಿನ ಅವಧಿಯಲ್ಲಿ ದಕ್ಷಿಣ ಸುಡಾನ್ನ ಹಲವು ಗ್ರಾಮಗಳಿಗೆ ಹೋರಾಟಗಾರರ ಪಡೆಗಳು ಎಲ್ಲಾ ದಿಕ್ಕಿನಿಂದ ಮುತ್ತಿಗೆ ಹಾಕಿದ್ದರಿಂದ ಸಾವಿರಾರು ಜನ ಅಲ್ಲಿಂದ ಪಲಾಯನ ಮಾಡಿದ್ದಾರೆ. ತಂಬುರ ಗ್ರಾಮದ ಸುತ್ತ ನಡೆದ ಘರ್ಷಣೆಯಲ್ಲಿ ಸರಕಾರಕ್ಕೆ ನಿಷ್ಟವಾಗಿರುವ ದಕ್ಷಿಣ ಸುಡಾನ್ ಜನತಾ ರಕ್ಷಣಾ ಪಡೆ(ಎಸ್ಎಸ್ಪಿಡಿಎಫ್) ಮತ್ತು ಸುಡಾನ್ ಪೀಪಲ್ಸ್ ಲಿಬರೇಷನ್ ಆರ್ಮಿ-ಇನ್ ಅಪೊಸಿಷನ್(ಎಸ್ಪಿಎಲ್ಎ_ಐಒ) ಪಡೆಗಳ ಮಧ್ಯೆ ಭೀಕರ ಕದನ ನಡೆದಿದೆ ಎಂದು ಗುರುವಾರ ಪ್ರಕಟವಾದ ವರದಿ ಹೇಳಿದೆ.
ಅಝಾಂದೆ ಮತ್ತು ಬಲಾಂಡ ಸಮುದಾಯದ ಸದಸ್ಯರ ವಿರುದ್ಧ ನಡೆದಿರುವ ಸಂಭಾವ್ಯ ಯುದ್ಧಾಪರಾಧ ಮತ್ತು ಇತರ ಉಲ್ಲಂಘನೆಯ ಪ್ರಕರಣಗಳ ದಾಖಲೆಯನ್ನು ಸಂಗ್ರಹಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.





