ಗುಜರಾತ್ ಹತ್ಯಾಕಾಂಡ: ಝಕಿಯಾ ಜಾಫ್ರಿ ಹೊರತಾಗಿ ಯಾರೂ ನಮ್ಮ ವಿರುದ್ಧ ಬೆರಳು ತೋರಿಸಿಲ್ಲ ಎಂದ ಎಸ್ಐಟಿ

ಝಕಿಯಾ ಜಾಫ್ರಿ (File Photo: PTI)
ಹೊಸದಿಲ್ಲಿ, ಡಿ. 9: ಝಕಿಯಾ ಜಾಫ್ರಿ ಅವರು ಸಲ್ಲಿಸಿದ ಮನವಿ ಹೊರತುಪಡಿಸಿ 2002ರ ಗುಜರಾತ್ ಹತ್ಯಾಕಾಂಡದ ಬಗ್ಗೆ ತಾವು ನಡೆಸಿರುವ ತನಿಖೆ ಬಗ್ಗೆಯಾರೊಬ್ಬರು ಬೆರಳು ತೋರಿಸಿಲ್ಲ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
2002 ಫೆಬ್ರವರಿ 28ರಂದು ಅಹ್ಮದಾಬಾದ್ ನ ಗುಲ್ಬರ್ಗಾ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಹತ್ಯೆಗೀಡಾದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು, ಗಲಭೆ ಸಂದರ್ಭ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿದಂತೆ 64 ಮಂದಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿದ್ದಾರೆ.
ಎಸ್ಐಟಿ ನಿರ್ಧಾರದ ವಿರುದ್ಧ ಝಕಿಯಾ ಜಾಫ್ರಿ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಉಚ್ಚ ನ್ಯಾಯಾಲಯ 2017 ಅಕ್ಟೋಬರ್ 5ರಂದು ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಝಕಿಯಾ ಜಾಪ್ರಿ ಅವರು ಸಲ್ಲಿಸಿದ ಮನವಿಯ ತೀರ್ಪನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ಕಾಯ್ದಿರಿಸಿದೆ. ಎಸ್ಐಟಿ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ, ಜಾಫ್ರಿ ಮನವಿ ಕುರಿತಂತೆ ವಿಚಾರಣಾ ನ್ಯಾಯಾಲಯ ಹಾಗೂ ಗುಜರಾತ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಅನುಮೋದಿಸಬೇಕು. ಇಲ್ಲದೇ ಇದ್ದರೆ, ವಿಚಾರಣೆ ನಿರಂತರ ಪ್ರಕ್ರಿಯೆಯಾಗುತ್ತದೆ. ಯಾಕೆಂದರೆ, ಮನವಿಯಲ್ಲಿ ಎರಡನೇ ದೂರುದಾರರಾಗಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸಟಲ್ವಾಡ್ ಅವರ ‘ಕೆಲವು ಉದ್ದೇಶಗಳು ಇವೆ’ಎಂದರು.







