ಚರ್ಚ್‌ಗೆ ನುಗ್ಗಲು ಬಲಪಂಥೀಯ ಸಂಘಟನೆ ಕಾರ್ಯಕರ್ತರ ಯತ್ನ: ದಾಳಿ ತಡೆದ ಪೊಲೀಸರು

ಚಂಡೀಗಢ: ಹರ್ಯಾಣದ ರೋಹ್ಟಕ್‌ನಲ್ಲಿ ಚರ್ಚ್‌ಗೆ ಬಲವಂತವಾಗಿ ನುಗ್ಗಲು ಬಲಪಂಥೀಯ ಸಂಘಟನೆಗಳ ಹಲವು ಕಾರ್ಯಕರ್ತರು ಯತ್ನಿಸಿದ ಘಟನೆ ವರದಿಯಾಗಿದೆ. ಆದರೆ ಅಂತಿಮವಾಗಿ ಚರ್ಚ್ ಮೇಲಿನ ದಾಳಿ ತಡೆಯುವಲ್ಲಿ ಪೊಲೀಸರು ಯಶಸ್ವಿಯಾದರು.
ಚರ್ಚ್ ಧಾರ್ಮಿಕ ಮತಾಂತರದಲ್ಲಿ ತೊಡಗಿದೆ ಎನ್ನುವುದು ಸಂಘಟನೆಗಳ ಆರೋಪ. ಹರ್ಯಾಣ ಕೂಡಾ ಉತ್ತರ ಪ್ರದೇಶ ಮಾದರಿಯಲ್ಲಿ ಮತಾಂತರ ತಡೆ ಕಾನೂನು ಜಾರಿಗೆ ತರುವ ಯೋಚನೆಯಲ್ಲಿದೆ.
ಮತಾಂತರ ಆರೋಪದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಅಂತಿಮವಾಗಿ ಗುಂಪನ್ನು ಸಮಾಧಾನಪಡಿಸಿ ಚದುರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
"ಇತರ ಪ್ರಾರ್ಥನಾ ಸ್ಥಳಗಳಂತೆ ಜನ ಭಕ್ತಿಯಿಂದ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಬರುವಂತೆ ಯಾರನ್ನೂ ಬಲವಂತಪಡಿಸಿಲ್ಲ" ಎಂದು ಚರ್ಚ್‌ನ ಸಹ ಪಾಸ್ಟರ್ ಸುದ್ದಿಗಾರರಿಗೆ ತಿಳಿಸಿದರು. ಹಿಂದಿನ ದಿನ ಸಂಜೆ ಪೊಲೀಸರು ಭೇಟಿ ನೀಡಿ ಪ್ರತಿಭಟನೆ ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದರು ಮತ್ತು ಪರಿಸ್ಥಿತಿ ವೀಕ್ಷಿಸಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಇಂಥ ಕೆಲವು ಘಟನೆಗಳು ನಡೆಯುತ್ತಿರಬಹುದು ಎಂಬ ಬಗ್ಗೆ ದೂರು ಬಂದಿದೆ. ಆದರೆ ಮತಾಂತರದ ಬಗ್ಗೆ ನಿರ್ದಿಷ್ಟ ಯಾವುದೇ ದೂರು ದಾಖಲಾಗಿಲ್ಲ" ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಮನೋಜ್ ಕುಮಾರ್ ಹೇಳಿದ್ದಾರೆ.
ಆರೋಪದ ಬಗ್ಗೆ ಪೊಲೀಸರು ಸ್ವತಂತ್ರ ತನಿಖೆ ನಡೆಸಿದ್ದು, ಮತಾಂತರದ ನಿದರ್ಶನಗಳು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿ ರವಿವಾರ ಹಾಗೂ ಗುರುವಾರಗಳಂದು ಕಳೆದ ಆರು ವರ್ಷಗಳಿಂದ ಜನತೆ ಇಲ್ಲಿ ಪ್ರಾರ್ಥನೆಯಲ್ಲಿ ಸೇರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪ ಬಂದ ತಕ್ಷಣ ಚರ್ಚ್‌ಗೆ ಪೊಲೀಸ್ ಕಾವಲು ಒದಗಿಸಲಾಗಿದೆ. ಯಾವುದೇ ಅನುಮತಿ ಇಲ್ಲದೇ ಸೇರಿದ ಜನಸಮೂಹವನ್ನು ಚದುರಿಸಲಾಗಿದೆ ಎಂದು ಮನೋಜ್ ವಿವರಿಸಿದ್ದಾರೆ.