ಸೀಮಿತ ಓವರ್ ಕ್ರಿಕೆಟಿಗೆ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ನಾಯಕತ್ವ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಸ್ಪಷ್ಟನೆ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಆಯ್ಕೆಗಾರರು ಒಟ್ಟಾಗಿ ರೋಹಿತ್ ಶರ್ಮಾ ಅವರನ್ನು ಸೀಮಿತ ಓವರ್ ಕ್ರಿಕೆಟ್ ತಂಡದ ಪೂರ್ಣಾವಧಿಯ ನಾಯಕರನ್ನಾಗಿ ನೇಮಿಸಲು ನಿರ್ಧರಿಸಿದರು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಗುರುವಾರ ಸ್ಪಷ್ಟಪಡಿಸಿದರು.
ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರನ್ನು ಬುಧವಾರ ಭಾರತದ ನೂತನ ಏಕದಿನ ಕ್ರಿಕೆಟ್ ನಾಯಕರನ್ನಾಗಿ ನೇಮಿಸಲಾಯಿತು
ತಾವು ಹಾಗೂ ಆಯ್ಕೆ ಸಮಿತಿ ಅಧ್ಯಕ್ಷರು ಕೂಡ ಕೊಹ್ಲಿ ಜತೆ ಮಾತನಾಡಿರುವುದಾಗಿ ತಿಳಿಸಿದ ಗಂಗುಲಿ ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್ ನಲ್ಲಿ ಕೊಹ್ಲಿ ನೀಡಿದ ಕೊಡುಗೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು.
"ಇದು ಬಿಸಿಸಿಐ ಹಾಗೂ ಆಯ್ಕೆಗಾರರು ಒಟ್ಟಾಗಿ ತೆಗೆದುಕೊಂಡ ನಿರ್ಧಾರ. ವಾಸ್ತವವಾಗಿ, ಟ್ವೆಂಟಿ-20 ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್‌ಗೆ ಬಿಸಿಸಿಐ ವಿನಂತಿಸಿತ್ತು ಆದರೆ ಸ್ಪಷ್ಟವಾಗಿ, ಅವರು ಒಪ್ಪಲಿಲ್ಲ. ಬಳಿಕ ಆಯ್ಕೆಗಾರರು ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟಿಗೆ ಇಬ್ಬರು ನಾಯಕರು ಇರುವುದು ಸರಿಯಲ್ಲ ಎಂದು ತೀರ್ಮಾನಿಸಿದರು’’ ಗಂಗುಲಿ ಎಎನ್‌ಐಗೆ ತಿಳಿಸಿದರು.
" ವಿರಾಟ್ ಟೆಸ್ಟ್ ನಾಯಕರಾಗಿ ಮುಂದುವರಿಯುತ್ತಾರೆ ಹಾಗೂ ರೋಹಿತ್ ಏಕದಿನ ಹಾಗೂ ಟ್ವೆಂಟಿ-20 ನಾಯಕರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದು ನಿರ್ಧರಿಸಲಾಯಿತು. ಅಧ್ಯಕ್ಷನಾಗಿ ನಾನು ವಿರಾಟ್ ಕೊಹ್ಲಿ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರು ಕೂಡ ಅವರೊಂದಿಗೆ ಮಾತನಾಡಿದ್ದಾರೆ’’ ಎಂದು ಗಂಗುಲಿ ಹೇಳಿದರು.
"ನಾವು ರೋಹಿತ್ ಶರ್ಮಾ ಅವರ ನಾಯಕತ್ವದ ಸಾಮರ್ಥ್ಯದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇವೆ ವಿರಾಟ್ ಟೆಸ್ಟ್ ನಾಯಕರಾಗಿ ಮುಂದುವರಿಯುತ್ತಾರೆ. ಭಾರತೀಯ ಕ್ರಿಕೆಟ್ ಉತ್ತಮ ಕೈಯಲ್ಲಿದೆ ಎಂದು ಬಿಸಿಸಿಐ ವಿಶ್ವಾಸ ಹೊಂದಿದೆ. ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ನಾಯಕನಾಗಿ ಅವರು ನೀಡಿದ ಕೊಡುಗೆಗಳಿಗಾಗಿ ನಾವು ವಿರಾಟ್ ಕೊಹ್ಲಿಗೆ ಧನ್ಯವಾದ ಹೇಳುತ್ತೇವೆ" ಬಿಸಿಸಿಐ ಅಧ್ಯಕ್ಷರು ಹೇಳಿದರು.