ಜನರಲ್ ಬಿಪಿನ್ ರಾವತ್ ಬಗ್ಗೆ ಅವಹೇಳನಕಾರಿ ಹೇಳಿಕೆ:ಗುಜರಾತ್ ವ್ಯಕ್ತಿಯ ಬಂಧನ

ಅಹಮದಾಬಾದ್: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಫೇಸ್‌ಬುಕ್ ಪುಟದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಗುಜರಾತ್‌ನ 44 ವರ್ಷದ ವ್ಯಕ್ತಿಯೊಬ್ಬನನ್ನು ಅಹಮದಾಬಾದ್ ಸೈಬರ್ ಕ್ರೈಮ್ ಸೆಲ್ ಗುರುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಶಿವಭಾಯಿ ರಾಮ್ ಎಂದು ಗುರುತಿಸಲಾಗಿದ್ದು, ಗುಜರಾತ್‌ನ ಅಮ್ರೇಲಿ ಜಿಲ್ಲೆಯ ರಾಜುಲಾ ತಾಲೂಕಿನ ಭೇರೈ ಗ್ರಾಮದ ನಿವಾಸಿ ಎಂದು ಸೈಬರ್ ಕ್ರೈಂ ಸೆಲ್ ತಿಳಿಸಿದೆ.
ಆದಾಗ್ಯೂ, ತಮಿಳುನಾಡಿನಲ್ಲಿ ಬುಧವಾರ ಇತರ 12 ಜನರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ರಾವತ್ ವಿರುದ್ಧ ಶಿವಭಾಯಿ ಫೇಸ್ ಬುಕ್ ಪೋಸ್ಟ್ ಗಳ ಬಗ್ಗೆ ಸೈಬರ್ ಕ್ರೈಂ ಸೆಲ್ ಏನನ್ನೂ ಉಲ್ಲೇಖಿಸಿಲ್ಲ.
"ಜನರಲ್ ಬಿಪಿನ್ ರಾವತ್ ಅವರ ಕುರಿತು ಕೆಲವು ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡ ನಂತರ ಆರೋಪಿಯು ನಮ್ಮ ರಾಡಾರ್ ಗೆ ಒಳಪಟ್ಟಿದ್ದಾನೆ. ಆತನ ಟೈಮ್‌ಲೈನ್ ಅನ್ನು ಸ್ಕ್ಯಾನ್ ಮಾಡಿದಾಗಆತ ಈ ಹಿಂದೆ ಹಿಂದೂ ದೇವ-ದೇವತೆಗಳ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾನೆ ಎಂದು ನಮಗೆ ಅರಿವಾಯಿತು. ಆತ ತನ್ನ ಹಿಂದಿನ ಫೇಸ್‌ಬುಕ್‌ನಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದ" ಎಂದು ಸಹಾಯಕ ಪೊಲೀಸ್ ಕಮಿಷನರ್ ಜಿತೇಂದ್ರ ಯಾದವ್ ಹೇಳಿದರು.
ಎಫ್‌ಐಆರ್ ದಾಖಲಿಸಿದ ಬಳಿಕ ಸೈಬರ್ ಕ್ರೈಂ ಅಧಿಕಾರಿಗಳು ಶಿವಭಾಯಿ ರಾಮ್‌ನನ್ನು ಅವರ ಸ್ಥಳೀಯ ಸ್ಥಳವಾದ ಅಮ್ರೇಲಿಯಿಂದ ಬಂಧಿಸಿ ಇಲ್ಲಿಗೆ ಕರೆತಂದಿದ್ದಾರೆ.
ಶಿವಭಾಯಿ 2010ರಿಂದ 2014ರ ಅವಧಿಯಲ್ಲಿ ಉಪ ಸರಪಂಚ್ ಆಗಿ (ತಮ್ಮ ಗ್ರಾಮದ) ಸೇವೆ ಸಲ್ಲಿಸಿದ್ದ. ಮುಂಬರುವ ವರ್ಷಗಳಲ್ಲಿ ಸರಪಂಚ್ ಆಗಿ ಆಯ್ಕೆಯಾಗುವ ಮಹತ್ವಾಕಾಂಕ್ಷೆ ಹೊಂದಿರುವುದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಿ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದ ಎಂದು ಎಸಿಪಿ ಯಾದವ್ ತಿಳಿಸಿದ್ದಾರೆ.