ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ: ಹರ್ಯಾಣ ಸಿಎಂ ಖಟ್ಟರ್

ಗುರುಗ್ರಾಮ: ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರದ ನಮಾಝ್ ಅನ್ನು ಮುಸ್ಲಿಂ ಧರ್ಮೀಯರು ನಿರ್ವಹಿಸುತ್ತಿರುವುದಕ್ಕೆ ಈಗಾಗಲೇ ಹಲವು ತಿಂಗಳುಗಳಿಂದ ಬಲಪಂಥೀಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಾ, ನಮಾಝ್ ಗೆ ಅಡ್ಡಿಪಡಿಸುತ್ತಾ ಬಂದಿದ್ದಾರೆ. ಇದೀಗ ಹಿಂದುತ್ವ ಸಂಘಟನೆಗಳೊಂದಿಗೆ ಹರ್ಯಾಣ ಮುಖ್ಯಮಂತ್ರಿ ಖಟ್ಟರ್ ಧ್ವನಿಗೂಡಿಸಿದ್ದು, ಬಹಿರಂಗವಾಗಿ ನಮಾಝ್ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ತೆರೆದ ಪ್ರದೇಶಗಳಲ್ಲಿ ಪ್ರಾರ್ಥನೆ ನಡೆಸಲು ಕೆಲವು ಸ್ಥಳಗಳನ್ನು ಮೀಸಲಿಡುವ ಜಿಲ್ಲಾಡಳಿತದ ಹಿಂದಿನ ನಿರ್ಧಾರವನ್ನು ಹಿಂಪಡೆಯಲಾಗಿದ್ದು, ರಾಜ್ಯ ಸರ್ಕಾರವು ಈಗ ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರವನ್ನು ರೂಪಿಸಲಿದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗುರುಗ್ರಾಮದ ತೆರೆದ ಸಾರ್ವಜನಿಕ ಜಾಗಗಳಲ್ಲಿ ನಮಾಝ್ ಮಾಡುವ ಪರಿಪಾಠವನ್ನು ಸಹಿಸಲು ಸಾಧ್ಯವಿಲ್ಲ. ಆದರೆ, ಇದಕ್ಕೆ ನಾವೆಲ್ಲರೂ ಸೌಹಾರ್ದಯುತ ಪರಿಹಾರ ಕಂಡುಹುಡುಕಬೇಕಾಗಿದೆ. ಪ್ರತಿಯೊಬ್ಬರಿಗೂ ಪ್ರಾರ್ಥನೆ ಸಲ್ಲಿಸುವ ಹಕ್ಕಿದೆ. ಆದರೆ ಯಾರೂ ಇತರರ ಹಕ್ಕುಗಳನ್ನು ಉಲ್ಲಂಘಿಸಬಾರದು. ಈ ಉದ್ದೇಶಕ್ಕಾಗಿಯೇ ಧಾರ್ಮಿಕ ಸ್ಥಳಗಳನ್ನು ನಿರ್ಮಿಸಲಾಗಿದ್ದು, ಜನರು ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ, ಬಯಲು ಜಾಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಬಾರದು ಎಂದರು.