ವಿಕಿಲೀಕ್ಸ್ ಸ್ಥಾಪಕ ಅಸಾಂಜೆ ಹಸ್ತಾಂತರ ಕೋರಿದ್ದ ಅಮೆರಿಕ ಮನವಿ ಪುರಸ್ಕೃತ

photo:PTI
ವಾಷಿಂಗ್ಟನ್, ಡಿ.10: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆಯ ಹಸ್ತಾಂತರ ಕುರಿತ ಅಮೆರಿಕ ಸರಕಾರದ ಮನವಿಯನ್ನು ಬ್ರಿಟನ್ನ ಹೈಕೋರ್ಟ್ ಪುರಸ್ಕರಿಸಿದೆ. ಇದರೊಂದಿಗೆ ಲಂಡನ್ನ ಜೈಲಿನಲ್ಲಿರುವ ಅಸಾಂಜೆ ಅಮೆರಿಕಕ್ಕೆ ಹಸ್ತಾಂತರಗೊಳ್ಳಲು ಇನ್ನಷ್ಟು ನಿಕಟವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಮಿಲಿಟರಿಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ವಿಕಿಲೀಕ್ಸ್ನಲ್ಲಿ ಪ್ರಕಟಿಸಿದ ಆರೋಪ ಅಸಾಂಜೆಯ ಮೇಲಿದೆ. ಅವರು ಈಗ ಲಂಡನ್ನ ಗರಿಷ್ಟ ಭದ್ರತೆಯ ಬೆಲ್ಮಾರ್ಶ್ ಜೈಲಿನಲ್ಲಿದ್ದಾರೆ. ಅಸಾಂಜೆಯ ಮಾನಸಿಕ ಆರೋಗ್ಯ ಅಮೆರಿಕದ ನ್ಯಾಯಾಂಗ ವ್ಯವಸ್ಥೆಯನ್ನು ತಡೆದುಕೊಳ್ಳಲು ತುಂಬಾ ದುರ್ಬಲವಾಗಿದೆ ಎಂದು ಹೇಳಿದ್ದ ಕೆಳನ್ಯಾಯಾಲಯ, ಅಸಾಂಜೆಯನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಕೋರಿಕೆಯನ್ನು ಈ ವಾರದ ಆರಂಭದಲ್ಲಿ ಕೆಳ ನ್ಯಾಯಾಲಯ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಅಮೆರಿಕ ಮೇಲ್ಮನವಿ ಸಲ್ಲಿಸಿದ್ದು ಅಸಾಂಜೆ ಗಂಭೀರ ಪ್ರಮಾಣದ ಮಾನಸಿಕ ಅಸ್ವಸ್ಥತೆ ಹೊಂದಿರುವ ದಾಖಲೆಯಿಲ್ಲ ಎಂದು ವಾದಿಸಿತ್ತು.
ಅಲ್ಲದೆ ಅಸಾಂಜೆಯನ್ನು ಹಸ್ತಾಂತರಿಸಿದರೆ ಅವರು ತಮ್ಮ ಸ್ವದೇಶ ಆಸ್ಟ್ರೇಲಿಯಾದಲ್ಲಿ ಯಾವ ರೀತಿಯ ಶಿಕ್ಷೆ ಪಡೆಯುತ್ತಿದ್ದರೂ ಅದನ್ನೇ ಅಮೆರಿಕದಲ್ಲಿ ಪಡೆಯಲಿದ್ದಾರೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಅಮೆರಿಕದ ಸೇನಾಪಡೆಯ ರಹಸ್ಯ ಮಾಹಿತಿಗಳನ್ನು ವಿಕಿಲೀಕ್ಸ್ನಲ್ಲಿ ಪ್ರಕಟಿಸಿದ್ದಕ್ಕೆ ಅಸಾಂಜೆಯ ವಿರುದ್ಧ ಅಮೆರಿಕದಲ್ಲಿ 17 ಬೇಹುಗಾರಿಕೆ ಪ್ರಕರಣ ಮತ್ತು ಕಂಪ್ಯೂಟರ್ ಮಾಹಿತಿ ದುರ್ಬಳಕೆ ಪ್ರಕರಣ ದಾಖಲಾಗಿದೆ. ಅಪರಾಧ ಸಾಬೀತಾದರೆ ಅಸಾಂಜೆಗೆ ಗರಿಷ್ಟ 175 ವರ್ಷ ಜೈಲುಶಿಕ್ಷೆಯಾಗಬಹುದು.
ಈ ಮಧ್ಯೆ, ಹಸ್ತಾಂತರ ಆದೇಶ ಪ್ರಶ್ನಿಸಿ ಅಸಾಂಜೆಯ ವಕೀಲರು ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.







