ಸುಡಾನ್ ಹಿಂಸಾಚಾರ: ಕನಿಷ್ಟ 138 ಮಂದಿ ಸಾವು

ಸಾಂದರ್ಭಿಕ ಚಿತ್ರ
ಖಾರ್ಟಮ್, ಡಿ.10: ಪೂರ್ವ ಸುಡಾನ್ ನ ರಾಜ್ಯ ದಾರ್ಪುರ್ ನ 3 ಪ್ರತ್ಯೇಕ ಪ್ರದೇಶಗಳಲ್ಲಿ ಇತ್ತೀಚಿಗೆ ಸಂಭವಿಸಿದ ಹಿಂಸಾಚಾರದಲ್ಲಿ ಕನಿಷ್ಟ 138 ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪಶ್ಚಿಮ ದಾರ್ಪುರ್ ವೈದ್ಯರ ಸಮಿತಿಯ ಹೇಳಿಕೆ ತಿಳಿಸಿದೆ.ಕ್ರೈನಿಕ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 88 ಮಂದಿ ಮೃತಪಟ್ಟು 84 ಮಂದಿ ಗಾಯಗೊಂಡಿದ್ದರೆ, ಜೆಬೆಲ್ ಮೂನ್ ಮೌಂಟೇನ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 25 ಮಂದಿ ಮೃತಪಟ್ಟು 4 ಮಂದಿ ಗಾಯಗೊಂಡಿದ್ದಾರೆ. ಸರ್ಬಾ ಪ್ರದೇಶದಲ್ಲಿನ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟು 6 ಮಂದಿ ಗಾಯಗೊಂಡಿದ್ದಾರೆ ಎಂದು ಸಮಿತಿ ಹೇಳಿದೆ.
ಸಕಾಲದಲ್ಲಿ ವೈದ್ಯಕೀಯ ನೆರವು ದೊರಕದ ಕಾರಣ ಹಲವು ಗಾಯಾಳುಗಳು ಸಾವನ್ನಪ್ಪಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆಯಿದೆ ಎಂದು ವೈದ್ಯರು ಹೇಳಿದ್ದಾರೆ. ನವೆಂಬರ್ 17ರಂದು ಜೆಬೆಲ್ ಮೂನ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಅರಬ್ ಒಂಟೆ ಪಶುಪಾಲಕರ ಮಧ್ಯೆ ಆರಂಭವಾದ ಘರ್ಷಣೆ ವ್ಯಾಪಕ ಹಿಂಸಾಚಾರಕ್ಕೆ ತಿರುಗಿದೆ. ಬಳಿಕ ಸೇನೆಯು ಪರಿಸ್ಥಿತಿಯನ್ನು ತಿಳಿಗೊಳಿಸಿತು ಎಂದು ವೆಸ್ಟ್ ದಾರ್ಫುರ್ ಗವರ್ನರ್ ಖಮಿಸ್ ಅಬ್ದುಲ್ಲಾ ಹೇಳಿದ್ದಾರೆ. ಡಿಸೆಂಬರ್ 4ರಂದು ವಿರೋಧಿ ಬಣದ ಮಧ್ಯೆ ಸ್ವಯಂಚಾಲಿತ ಶಸ್ತ್ರಾಸ್ತ್ರ ಬಳಸಿ ಮತ್ತೆ ಘರ್ಷಣೆ ನಡೆದಿದೆ. ಹೊರವಲಯದಿಂದ ನಗರಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಸ್ಥಳಾಂತರಗೊಳ್ಳುತ್ತಿದ್ದು ಇದೀಗ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಉದ್ಭವಿಸಿದೆ ಎಂದು ವೈದ್ಯರ ಸಮಿತಿ ಹೇಳಿದೆ.
ಈ ಮಧ್ಯೆ, ‘‘ಝಮ್ಝಮ್ ನ ನಿರಾಶ್ರಿತರ ಶಿಬಿರವನ್ನು ಸಶಸ್ತ್ರ ಬಂಡುಗೋರರ ಪಡೆ ಸುತ್ತುವರಿದಿದೆ. ಉತ್ತರ ದಾರ್ಫುರ್ನ ಡೋಂಕಿ ಸತಾ ಪ್ರದೇಶದ ಶಿಬಿರದ ಮೇಲೂ ದಾಳಿ ನಡೆದಿದೆ’ ಎಂದು ನಿರಾಶ್ರಿತರು ಮತ್ತು ಸ್ಥಳಾಂತರಗೊಂಡವರ ಶಿಬಿರದ ಸಮನ್ವಯ ಸಮಿತಿ ಹೇಳಿದೆ. ದಾರ್ಫುರ್ನಲ್ಲಿನ ಸಂಘರ್ಷ 2003ರ ಸಂಘರ್ಷದ ಸ್ಫೋಟಕ್ಕೆ ಮುಂಚಿನ ಅಂತರ್-ಕೋಮು ಹಿಂಸಾಚಾರವನ್ನು ನೆನಪಿಸುತ್ತದೆ. ಈ ಹಿಂಸಾಚಾರ ವಿಶ್ವದ ಅತ್ಯಂತ ಘೋರ ಮಾನವೀಯ ದುರಂತಕ್ಕೆ ಕಾರಣವಾಗಿದ್ದು 3 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿ 2.5 ಮಿಲಿಯನ್ ಜನತೆ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ವ್ಯಾಪಕ ಸ್ಥಳಾಂತರ
ವಿಶ್ವಸಂಸ್ಥೆಯ ಪ್ರಕಾರ, ಜೆಬೆಲ್ ಮೂನ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಿಂದಲೇ 10,000ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದು ಇವರಲ್ಲಿ 2000 ಮಂದಿ ಗಡಿ ದಾಟಿ ಚಾಡ್ ದೇಶಕ್ಕೆ ಪಲಾಯನ ಮಾಡಿದ್ದಾರೆ. 2021ರ ಜನವರಿ ಮತ್ತು ಸೆಪ್ಟಂಬರ್ ನಡುವಿನ ಅವಧಿಯಲ್ಲಿ ಸ್ಥಳಾಂತರಗೊಂಡವರ ಸಂಖ್ಯೆ 2020ರ ವರ್ಷದಲ್ಲಿ ಸ್ಥಳಾಂತರಗೊಂಡಿದ್ದಕ್ಕಿಂತ 7 ಪಟ್ಟು ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಸಮಿತಿ ಹೇಳಿದೆ.







