ದಕ್ಷಿಣ ಏಶ್ಯಾ: ಪೂರ್ಣಪ್ರಮಾಣದಲ್ಲಿ ಶಾಲೆ ಆರಂಭಿಸಲು ವಿಶ್ವಸಂಸ್ಥೆ ಸಲಹೆ

photo:twitter/@UNICEF
ವಿಶ್ವಸಂಸ್ಥೆ, ಡಿ.10: ಕೊರೋನ ಸೋಂಕಿನಿಂದಾಗಿ ಭಾರತ ಮತ್ತದರ ನೆರೆದೇಶಗಳ ಸುಮಾರು 400 ಮಿಲಿಯನ್ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದು ಇದೀಗ ಶಾಲೆಗಳನ್ನು ಪೂರ್ಣಪ್ರಮಾಣದಲ್ಲಿ ಮರು ಆರಂಭಿಸುವ ಅಗತ್ಯವಿದೆ ಎಂದು ಯುನಿಸೆಫ್ ಹೇಳಿದ್ದು, ಕೊರೋನ ಸೋಂಕಿನ ಪರಿಣಾಮಗಳು ಹಲವು ದಶಕಗಳವರೆಗೆ ಇರಬಹುದು ಎಂದು ಎಚ್ಚರಿಸಿದೆ.
ಬಾಂಗ್ಲಾದೇಶದಲ್ಲಿ ಸುಮಾರು 18 ತಿಂಗಳಿನವರೆಗೆ ಶಾಲೆಗಳನ್ನು ಮುಚ್ಚಿದ್ದು ಇದು ವಿಶ್ವದಲ್ಲೇ ಅತ್ಯಧಿಕ ಸಮಯವಾಗಿದೆ. ದಕ್ಷಿಣ ಏಶ್ಯಾದ ಇತರ ಶಾಲೆಗಳು 2020 ಮಾರ್ಚ್-2021ರ ಆಗಸ್ಟ್ ನಡುವಿನ ಅವಧಿಯಲ್ಲಿ ಸರಾಸರಿ 31.5 ವಾರ ಮುಚ್ಚಿದ್ದವು . ದೂರ ಶಿಕ್ಷಣ ವ್ಯವಸ್ಥೆಗೆ ಸೂಕ್ತ ಮತ್ತು ಅನುಕೂಲಕರ ಪರಿಸ್ಥಿತಿ ಇಲ್ಲದ ಪ್ರದೇಶದಲ್ಲಿ ಇದು ಸಂಭವಿಸಿದೆ . ಇದು ಹೀಗೆಯೇ ಮುಂದುವರಿದರೆ ದುರ್ಬಲ ಕಾರ್ಮಿಕ ವರ್ಗ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಯ ದಕ್ಷಿಣ ಏಶ್ಯಾ ಪ್ರಾದೇಶಿಕ ನಿರ್ದೇಶಕ ಜಾರ್ಜ್ ಲಾರ್ಯಾ-ಅಡ್ಜೈ ಹೇಳಿದ್ದಾರೆ.
ಇಂಟರ್ನೆಟ್ ಬಳಕೆಯ ಅವಕಾಶ ಮತ್ತು ಸ್ಮಾರ್ಟ್ ಫೋನ್ನಂತಹ ಸಾಧನಗಳ ಬಳಕೆಯಲ್ಲೂ ಅಸಮಾನತೆ ಇತ್ತು. ವಿಶೇಷವಾಗಿ ಬಡ ಸಮುದಾಯದ ಮಕ್ಕಳು ಮತ್ತು ಬಾಲಕಿಯರು ಅವಕಾಶ ವಂಚಿತರಾಗಿದ್ದರು ಎಂದು ಯುನಿಸೆಫ್ ಹೇಳಿದ್ದು, ವೈಯಕ್ತಿಕ ಕಲಿಕಾ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಮತ್ತು ವಿದ್ಯಾರ್ಥಿಗಳು ಈ ವ್ಯವಸ್ಥೆಗೆ ಹೊಂದಿಕೊಳ್ಳುವುದನ್ನು ಖಾತರಿ ಪಡಿಸಬೇಕೆಂದು ದಕ್ಷಿಣ ಏಶ್ಯಾ ದೇಶಗಳನ್ನು ಆಗ್ರಹಿಸಿದೆ. ಭಾರತ, ಬಾಂಗ್ಲಾ, ನೇಪಾಳ ಮತ್ತು ಅಫ್ಘಾನಿಸ್ತಾನದಲ್ಲಿ ಶಾಲೆಗಳು ಭಾಗಶಃ ತೆರೆದಿರುತ್ತವೆ. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪೂರ್ಣ ತೆರೆದಿರುತ್ತದೆ ಎಂದು ಯುನೆಸ್ಕೋ ವರದಿ ಹೇಳಿದೆ.
ಆರೋಗ್ಯ ಸೇವಾ ಕ್ಷೇತ್ರಕ್ಕೆ ಕೊರೋನ ಸಾಂಕ್ರಾಮಿಕದಿಂದ ಆಗಿರುವ ಅಡೆತಡೆಯಿಂದ ಲಕ್ಷಾಂತರ ಮಕ್ಕಳು ಜೀವರಕ್ಷಕ ಲಸಿಕೆಯಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಿದ್ದು ಇದರಿಂದ ಮಕ್ಕಳ ಮರಣದ ಪ್ರಮಾಣ ಹೆಚ್ಚಬಹುದು. ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳಲ್ಲಿ ಮಾನಸಿಕ ಒತ್ತಡ, ಕಳಪೆ ಮಾನಸಿಕ ಆರೋಗ್ಯ ಸ್ಥಿತಿ ಮತ್ತು ಹಿಂಸಾ ಮನೋಭಾವ ಹೆಚ್ಚಲು ಕಾರಣವಾಗಬಹುದು. ಹೆಣ್ಣು ಮಕ್ಕಳಲ್ಲಿ ಅವಧಿಗೆ ಮುನ್ನ ವಿವಾಹದ ಅಪಾಯ ಹೆಚ್ಚಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ಭಾರತದಲ್ಲಿ ಗ್ರೇಡ್ 1 ಮಟ್ಟದ ಪಠ್ಯವನ್ನು ಓದುವ ಸಾಮರ್ಥ್ಯವಿರುವ ಗ್ರೇಡ್ 3 ಹಂತದ ಮಕ್ಕಳ ಪ್ರಮಾಣ 2018ರಲ್ಲಿ 42% ಇದ್ದರೆ, 2020ರಲ್ಲಿ 24%ಕ್ಕೆ ಕುಸಿದಿದೆ ಎಂದು ಅಧ್ಯಯನ ವರದಿ ಹೇಳಿದೆ.







