ಪಾಕಿಸ್ತಾನ: ಕದನ ವಿರಾಮಕ್ಕೆ ಅಂತ್ಯಹೇಳಿದ ಟಿಟಿಪಿ

file photo:PTI
ಇಸ್ಲಮಾಬಾದ್, ಡಿ.10: ಕಳೆದ 1 ತಿಂಗಳಿಂದ ಪಾಕಿಸ್ತಾನ ಸರಕಾರದೊಂದಿಗೆ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವನ್ನು ಅಂತ್ಯಗೊಳಿಸುವುದಾಗಿ ಸಶಸ್ತ್ರ ಸಂಘಟನೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಘೋಷಿಸಿದೆ.
ಶಾಂತಿ ಸಭೆ ಸಂದರ್ಭ ನೀಡಿದ್ದ ವಾಗ್ದಾನವನ್ನು ಪಾಕ್ ಅಧಿಕಾರಿಗಳು ಉಲ್ಲಂಘಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ . ಈ ಪರಿಸ್ಥಿತಿಯಲ್ಲಿ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ್ ತಾಲಿಬಾನ್ ಎಂದು ಕರೆಸಿಕೊಳ್ಳುವ ಟಿಟಿಪಿ ಪ್ರತಿಪಾದಿಸಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಶಾಂತಿ ಸಭೆಯ ಬಗ್ಗೆ ಅನಿಶ್ಚಿತತೆ ಮೂಡಿದೆ . 2007ರಿಂದಲೂ ಪಾಕ್ ಸರಕಾರದೊಂದಿಗೆ ಸಂಘರ್ಷದಲ್ಲಿ ನಿರತರಾಗಿರುವ ಮತ್ತು ಭದ್ರತಾ ಪಡೆ ಹಾಗೂ ನಾಗರಿಕರನ್ನು ಗುರಿಯಾಗಿಸಿ ಹಲವು ದಾಳಿಗಳನ್ನು ನಡೆಸಿರುವ ಟಿಟಿಪಿಯೊಂದಿಗೆ ಶಾಂತಿ ಮಾತುಕತೆ ಆರಂಭಿಸುವುದಾಗಿ ಪಾಕ್ ಸರಕಾರ ಘೋಷಿಸಿದ ಬಳಿಕ ನವೆಂಬರ್ 9ರಂದು ಕದನ ವಿರಾಮ ಜಾರಿಗೆ ಬಂದಿತ್ತು.
ಉಭಯ ಕಡೆಯ ನಡುವಿನ ಶಾಂತಿ ಮಾತುಕತೆ ನಿಗದಿಯಾದಂತೆ ಮುಂದುವರಿಯಲಿದೆ ಎಂದು ಕಳೆದ ತಿಂಗಳು ಪಾಕ್ ಪ್ರಧಾನಿ ಇಮ್ರಾನ್ಖಾನ್ ಘೋಷಿಸಿದ್ದರು. ಪಾಕಿಸ್ತಾನ್ ತಾಲಿಬಾನ್(ಟಿಟಿಪಿ) ಹಾಗೂ ಅಫ್ಘಾನ್ ತಾಲಿಬಾನ್ ನಡುವೆ ಸಂಪರ್ಕವಿದ್ದರೂ ಉಭಯ ಸಂಘಟನೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಅಧಿಕಾರ ವ್ಯವಸ್ಥೆಯೂ ಪ್ರತ್ಯೇಕವಾಗಿದೆ. ಪಾಕ್ ಸರಕಾರ-ಟಿಟಿಪಿ ನಡುವಿನ ಮಾತುಕತೆಯಲ್ಲಿ ಅಫ್ಗಾನ್ ತಾಲಿಬಾನ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನವೆಂಬರ್ 14ರಂದು ಅಫ್ಗಾನ್ ವಿದೇಶ ಸಚಿವ ಅಮೀರ್ಖಾನ್ ಮುತ್ತಖಿ ದೃಢಪಡಿಸಿದ್ದರು.







