ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ; ಡಿ.13ರಂದು ಕಾಂಗ್ರೆಸ್ ಮುಖಂಡರ ಸಭೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.10: ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಂಗಳೂರಿನ ಕಾಂಗ್ರೆಸ್ ಮುಖಂಡರ ಸಭೆಯನ್ನು ಡಿ.13ರಂದು ಸಂಜೆ ಬೆಂಗಳೂರಿನಲ್ಲಿ ಕರೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಕನಕಪುರದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಹೊರತುಪಡಿಸಿ ಪಕ್ಷದ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಮನ್ವಯಕಾರರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪಾದಯಾತ್ರೆಯಲ್ಲಿ ಭಾಗವಹಿಸುವವರು ಆನ್‍ಲೈನ್‍ನಲ್ಲಿ ತಮ್ಮ ಫೋಟೋ ಸಮೇತ ಹೆಸರು ನೋಂದಣಿ ಮಾಡಿಸಬೇಕು. ಒಂದು ದಿನ, ಎರಡು ದಿನ, ಮೂರು ದಿನದಿಂದ ಪಾದಯಾತ್ರೆ ಮುಗಿಯುವವರೆಗೂ ಎಷ್ಟು ದಿನ ಬೇಕಾದರೂ ಅವರು ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಶಿವಕುಮಾರ್ ಹೇಳಿದರು.
ಒಂದು ದಿನ ನಡೆಯುವವರಿಗೆ ಒಂದು, ಎರಡು ದಿನ ನಡೆಯುವವರಿಗೆ ಬೇರೆ, ಹತ್ತು ದಿನ ನಡೆಯುವವರಿಗೆ ಬೇರೆ ಹೀಗೆ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಪಕ್ಷದಿಂದ ಸರ್ಟಿಫಿಕೇಟ್ ನೀಡಲಾಗುವುದು. ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ಬೆಂಗಳೂರು ಜನರ ಹಿತದೃಷ್ಟಿಯಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್‍ಗೆ ಹೆಚ್ಚು ಸ್ಥಾನ: ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸೀಟುಗಳನ್ನು ರಾಜ್ಯದಲ್ಲಿ ಗೆಲ್ಲಲಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಸೀಟುಗಳನ್ನೂ ಗೆಲ್ಲುವ ಸೂಚನೆ, ಸಾಧ್ಯತೆಗಳಿವೆ ಎಂದು ಶಿವಕುಮಾರ್ ಹೇಳಿದರು.
ಯಡಿಯೂರಪ್ಪ ಹತಾಶರಾಗಿ ಜೆಡಿಎಸ್ ಬೆಂಬಲ ಯಾಚಿಸುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ತನ್ನ ಶಕ್ತಿ ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿ. ಅವರು ಬೆಂಬಲ ಕೇಳಬಾರದು ಅಂತ ಅಲ್ಲ. ಅದು ಅವರ ಹಕ್ಕು. ನಾವೂ ಪಕ್ಷಾತೀತವಾಗಿ ಬೆಂಬಲ ಕೇಳಿದ್ದೇವೆ. ಬಿಜೆಪಿ, ಜೆಡಿಎಸ್, ಪಕ್ಷೇತರರು ಎಲ್ಲರೂ ಕಾಂಗ್ರೆಸ್ ಬೆಂಬಲಿಸಿ ಎಂದಿದ್ದೇವೆ ಎಂದು ಅವರು ತಿಳಿಸಿದರು.
ಆದರೆ ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡುತ್ತೇವೆ, 15 ವರ್ಷ ವಿರೋಧ ಪಕ್ಷದಲ್ಲೇ ಕೂರಿಸುತ್ತೇವೆ ಎಂದೆಲ್ಲ ಹೇಳಿದ್ದಾರೆ. ಹಾಗೆ ಹೇಳಿದವರು ಹೋಗಿ ಜೆಡಿಎಸ್ ಬೆಂಬಲ ಕೇಳಿದ್ದಾರೆ. ಇದು ಬಿಜೆಪಿ ದುಸ್ಥಿತಿ ಮತ್ತು ಶಕ್ತಿ ಕುಂದಿರುವುದನ್ನು ತೋರಿಸುತ್ತದೆ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಸರಕಾರದ ಯಂತ್ರ ದುರುಪಯೋಗ ಆಗಿರೋದ್ರಿಂದ ಒಂದೆರಡು ಕಡೆ ಹೆಚ್ಚು-ಕಮ್ಮಿ ಆಗಬಹುದು. ಆದರೂ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನಗಳು ಬರಲಿವೆ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.







