ಶೂಟಿಂಗ್: ದಿವ್ಯಾಂಶ್ ಪನ್ವಾರ್ಗೆ ಅವಳಿ ರಾಷ್ಟ್ರೀಯ ಪ್ರಶಸ್ತಿ

photo:instagram/@divyanshsinghpanwar
ಭೋಪಾಲ್, ಡಿ.10: ವಿಶ್ವದ ಮಾಜಿ ನಂ.1 ಶೂಟರ್ ದಿವ್ಯಾಂಶ್ ಪನ್ವಾರ್ ಇಲ್ಲಿನ ಎಂಪಿ ಶೂಟಿಂಗ್ ಅಕಾಡಮಿ ರೇಂಜ್ನಲ್ಲಿ ಪುರುಷರ 10 ಮೀ. ಏರ್ ರೈಫಲ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಬೆನ್ನುಬೆನ್ನಿಗೆ ಸೀನಿಯರ್ ಹಾಗೂ ಜೂನಿಯರ್ ಏರ್ ರೈಫಲ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡರು.
ರೈಫಲ್ ಇವೆಂಟ್ನಲ್ಲಿ ನಡೆದ 64ನೇ ಆವೃತ್ತಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧಾವಳಿಯ ಫೈನಲ್ ಸುತ್ತಿನಲ್ಲಿ 250 ಸ್ಕೋರ್ ಗಳಿಸಿದ ದಿವ್ಯಾಂಶ್ ಮೊದಲ ಸ್ಥಾನ ಪಡೆದರೆ, ಮಹಾರಾಷ್ಟ್ರದರುದ್ರಾಂಕ್ಷ್ ಬಾಲಾಸಾಹೇಬ್ ಪಾಟೀಲ್(249.3) ಹಾಗೂ ಅಸ್ಸಾಮಿನ ಹೃದಯ್ ಹಝಾರಿಕ(228.2)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡರು.
ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಈ ಬಾರಿ 800 ಸ್ಪರ್ಧಾಳುಗಳು ಹೆಸರು ನೋಂದಾಯಿಸಿದ್ದು, 768 ಕ್ರೀಡಾಳುಗಳು ಭಾಗವಹಿಸಿದ್ದರು.
63ನೇ ಆವೃತ್ತಿಯ ರಾಷ್ಟ್ರೀಯ ಚಾಂಪಿಯನ್ಶಿಪ್ನಂತೆಯೇ ರಾಜಸ್ಥಾನದ ಶೂಟರ್ ಪನ್ವಾರ್ ಈ ಬಾರಿಯೂ ಜೂನಿಯರ್ ಪುರುಷರ ಸ್ಪರ್ಧೆಯಲ್ಲಿ ಒಂದೇ ದಿನ ಎರಡು ಚಿನ್ನ ಜಯಿಸಿದರು.
ಜೂನಿಯರ್ ಶೂಟಿಂಗ್ ಫೈನಲ್ನಲ್ಲಿ ಪನ್ವಾರ್ 252.2 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ, ರುದ್ರಾಕ್ಷ್(251.2 ಅಂಕ) ಹಾಗೂ ದಿಲ್ಲಿಯ ಪಾರ್ಥ್ ಮಖಿಜಾ(229.9)ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು. ಮಧ್ಯಪ್ರದೇಶದ ಆಕಾಶ್ ಕುಶ್ವಾಹ ಹಾಗೂ ಪ್ರಗತಿ ದುಬೆ ಮಿಕ್ಸೆಡ್ ಟೀಮ್ ಟ್ರಾಪ್ ಸ್ಪರ್ಧೆಯಲ್ಲಿ ಜಯಶಾಲಿಯಾದರು. ಚಿನ್ನದ ಸುತ್ತಿನ ಪಂದ್ಯದಲ್ಲಿ ಈ ಜೋಡಿಯು ಹರ್ಯಾಣದ ಲಕ್ಷ ಶೆರೊನ್ ಹಾಗೂ ಭಾವನಾ ಚೌಧರಿಯವರನ್ನು 42-37 ಅಂತರದಿಂದ ಮಣಿಸಿತು. ತಮಿಳುನಾಡು ಕಂಚಿನ ಪದಕ ಜಯಿಸಿತು.