ಬೆಂಗಳೂರು: ಮಾಜಿ ಸಚಿವರ ಅಪಹರಣ ಪ್ರಕರಣದ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧನ

ಸಾಂದರ್ಭಿಕ ಚಿತ್ರ (source: PTI)
ಬೆಂಗಳೂರು, ಡಿ.11: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿ ಶೀಟರ್ ಓರ್ವನನ್ನು ಶನಿವಾರ ಮುಂಜಾನೆ ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.
ಜೆ.ಬಿ. ನಗರ ಠಾಣಾ ವ್ಯಾಪ್ತಿಯ ಚಲ್ಲಘಟ್ಟ ಏರಿಯಾದ ರೌಡಿಶೀಟರ್ ಲೋಹಿತ್ ಅಲಿಯಾಸ್ ರೋಹಿತ್ ಬಂಧಿತ ಆರೋಪಿ. ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಈತನ ವಿರುದ್ಧ ಇಂದಿರಾ ನಗರ ಠಾಣೆಯಲ್ಲಿ ಕೊಲೆ, ಅಪಹರಣ ಸೇರಿದಂತೆ 17 ಪ್ರಕರಣಗಳು ದಾಖಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಲೋಹಿತ್ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಈತನ ಬಂಧನಕ್ಕೆ ಇಂದು ಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದಾಗ ಪೊಲೀಸರು ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸ್ ಕಾನ್ ಸ್ಟೇಬಲ್ ಮೇಲೆಯೇ ಮಾರಕಾಯುಧದಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಕಾಲಿಗೆ ಗುಂಡಿಕ್ಕಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





