ಬೆಳಗಾವಿ ಅಧಿವೇಶನ: ಜಿಲ್ಲಾಡಳಿತ ಸಕಲ ಸಿದ್ಧತೆ

ಬೆಳಗಾವಿ: ಡಿಸೆಂಬರ್ 13ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆಯಲ್ಲಿ ತೊಡಗಿದೆ.
ಬೆಳಗಾವಿ ಅಧಿವೇಶನಕ್ಕೆ ಬರುವ ಪ್ರತಿಯೊಬ್ಬ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರು ಸೇರಿದಂತೆ ಎಲ್ಲಾ ಸಿಬ್ಬಂದಿ ಕೋವಿಡ್ ಎರಡು ಡೋಸ್ ಲಸಿಕೆ ಪಡೆದಿರಬೇಕು. ಅಷ್ಟೇ ಅಲ್ಲದೇ 72 ಗಂಟೆ ಮುಂಚಿತವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡ ಆರ್ಟಿಪಿಸಿಆರ್ ನೆಗೆಟಿವ್ ವರದಿ ತರೋದು ಕಡ್ಡಾಯ ಅಂತಾ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ತುರ್ತು ಸಂದರ್ಭದಲ್ಲಿ ಥ್ರೋಟ್ ಸ್ವ್ಯಾಬ್ ಪಡೆಯಲು ಸುವರ್ಣಸೌಧ ಗೇಟ್ ಬಳಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುವುದು ಹಾಗೂ ಸುವರ್ಣಸೌಧದ ಪ್ರತಿ ಕೊಠಡಿಯಲ್ಲಿ ಇ ಆಫೀಸ್ ತೆರೆಯುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಇಚ್ಚಿಸುವವರು ಸಹ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರಿಗೆ ಸುವರ್ಣ ಗಾರ್ಡನ್ ಹಾಗೂ ಕೊಂಡಸಕೊಪ್ಪ ಗ್ರಾಮದ ಬಳಿ ವ್ಯವಸ್ಥೆ ಮಾಡಿರೋದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಅಧಿವೇಶನ ವೇಳೆ ಭದ್ರತೆಗೆ ಆಗಮಿಸುವ ಪೊಲೀಸರಿಗಾಗಿ ತಾರಿಹಾಳ ಗ್ರಾಮದ ಬಳಿ ಬೃಹತ್ ಪೆಂಡಾಲ್ ಹಾಕಲಾಗಿದ್ದು ಅಲ್ಲಿಯೇ ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬೆಳಗಾವಿ ಡಿಸಿ ಆರ್.ವೆಂಕಟೇಶಕುಮಾರ್ ತಿಳಿಸಿದ್ದಾರೆ.










