ದ.ಕ. ಜಿಲ್ಲೆಯ ಅಹಿತಕರ ಘಟನೆಗಳಿಗೆ ಪೊಲೀಸ್, ಜಿಲ್ಲಾಡಳಿತ ಮೌನ: ಎಸ್ ಡಿಪಿಐ ಆರೋಪ

ಮಂಗಳೂರು, ಡಿ.11: ಕಳೆದೊಂದು ತಿಂಗಳಿಂದ ದಕ್ಷಿಣ ಜಿಲ್ಲೆಯಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಚೂರಿ ಇರಿತ, ತ್ರಿಶೂಲ ದಾಳಿಗಳು ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸ್ ಮತ್ತು ಜಿಲ್ಲಾಡಳಿತ ಮೌನವಾಗಿದೆ ಎಂದು ಎಸ್ ಡಿಪಿಐ ಆರೋಪಿಸಿದೆ.
ಮಂಗಳೂರಿನ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಉಪ್ಪಿನಂಗಡಿ, ಇಳಂತಿಲ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ನಿರಂತರ ದಾಳಿ ನಡೆಯುತ್ತಿದೆ. ರಾಜಕೀಯ ಹಾಗೂ ಸಂಘ ಪರಿವಾರದ ಮುಖಂಡರು ವೇದಿಕೆಯಲ್ಲಿ ನಿಂತು ಲಂಗು ಲಗಾಮಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಯ ಕಾಲರ್ ಪಟ್ಟಿ ಹಿಡಿಯುವಂತ ಮಾತು ಇತಿಹಾಸದಲ್ಲೇ ಇಲ್ಲ. ಪೊಲೀಸ್ ಇಲಾಖೆ ನಿಷ್ಕ್ರಿಯ ವಾಗಿದೆ ಎಂದರು.
ನಾಗಬನ ಅಪವಿತ್ರ ಪ್ರಕರಣವನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು. ಬಂಧಿತರು ಗಾಂಜಾ ವ್ಯವಸನಿಗಳು ಎನ್ನುವ ನೆಲೆಯಲ್ಲಿ ಕೆಲವರನ್ನು ಫಿಕ್ಸ್ ಮಾಡಿರುವ ಅನುಮಾನ ಇದೆ. ಈ ಬಗ್ಗೆ ಸಾಕಷ್ಟು ತನಿಖೆ ಅಗತ್ಯವಿದೆ ಎಂದು ಅಬೂಬಕರ್ ಕುಳಾಯಿ ಒತ್ತಾಯಿಸಿದ್ದಾರೆ.
ಉಳ್ಳಾಲದಲ್ಲಿ ವರ್ಷದಿಂದ ಪುಂಡ ಪೋಕರಿಗಳಿಂದ ಹಲ್ಲೆ, ಬ್ಯಾನರ್ ಹರಿಯುವುದು ನಿರಂತರ ಪೊಲೀಸ್ ಇಲಾಖೆಗೆ ದೂರು ಕೊಟ್ಟರೂ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ ಡಿಪಿಐ ರಾಜ್ಯ ಸಮಿತಿಯ ಸದಸ್ಯ ಜಲೀಲ್ ಕೆ., ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.







