ದಿಲ್ಲಿ ಗಲಭೆ: ಪೊಲೀಸರು ದಾಖಲಿಸಿಕೊಂಡ ಸಾಕ್ಷಿಗಳ ಹೇಳಿಕೆ ಪರಸ್ಪರ ಪೂರಕವಾಗಿಲ್ಲ: ಉಮರ್ ಖಾಲಿದ್

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರ ಸಂಚು ಪ್ರಕರಣದಲ್ಲಿ ಪೊಲೀಸರು ದಾಖಲಿಸಿಕೊಂಡಿರುವ ಸಾಕ್ಷಿಗಳ ಹೇಳಿಕೆಗಳು ʼಸುಳ್ಳು' ಎಂದು ಜೆಎನ್‍ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ದಿಲ್ಲಿಯ ನ್ಯಾಯಾಲಯವೊಂದರ ಮುಂದೆ ಹೇಳಿದ್ದಾರೆ.
ದಿಲ್ಲಿ ಹಿಂಸಾಚಾರದ ಹಿಂದೆ ಪ್ರಮುಖ ಪಾತ್ರ ವಹಿಸಿದ್ದಾರೆಂಬ ಆರೋಪದ ಮೇಲೆ ಖಾಲಿದ್ ಹಾಗೂ ಇನ್ನಿತರ ಹಲವರ ವಿರುದ್ಧ ಯುಎಪಿಎ ಅಥವಾ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ನು ಹೇರಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಖಾಲಿದ್ ಅವರು ಸಲ್ಲಿಸಿರುವ ಜಾಮೀನು ಅರ್ಜಿ ಮೇಲಿನ ವಿಚಾರಣೆ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ತ್ರೈದೀಪ್ ಪಾಯಸ್, ಸಾಕ್ಷಿಗಳ ಹೇಳಿಕೆಗಳು ಪರಸ್ಪರ ಪೂರಕವಾಗಿಲ್ಲ ಎಂದು ಹೇಳಿದರು.
ಸಾಕ್ಷಿಯೊಬ್ಬರ ಹೇಳಿಕೆಯನ್ನು ಓದಿದ ಅವರು "ಇದು ಸುಳ್ಳು ಎಂದು 12 ವರ್ಷದವರು ಕೂಡ ಹೇಳಬಹುದು. ಅವರು (ಪ್ರಾಸಿಕ್ಯೂಶನ್) ನಾಚಿಕೆ ಪಟ್ಟುಕೊಳ್ಳಬೇಕು. ಒಂದಿನಿತೂ ಭೌತಿಕ ಸಾಕ್ಷ್ಯವಿಲ್ಲ" ಎಂದು ಹೇಳಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಂತರ್ ಮಂತರ್‍ನಲ್ಲಿ ಸಿಎಎ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಖಾಲಿದ್ ಮತ್ತು ಅವರ ತಂದೆ ಉಪಸ್ಥಿತರಿದ್ದರು ಹಾಗೂ ಅಲ್ಲಿಗೆ ಮಹಿಳೆಯರು ಮತ್ತು ಮಕ್ಕಳನ್ನು ಬಸ್ಸುಗಳಲ್ಲಿ ಕರೆದುಕೊಂಡು ಬರಲಾಗಿತ್ತು ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ವಕೀಲರು, ಸಿಎಎ ವಿರುದ್ಧ ಜನರು ಪ್ರತಿಭಟಿಸಬೇಕೆನ್ನುವುದು ಹೇಗೆ ಅಪರಾಧವಾಗುತ್ತದೆ ಎಂದು ಕೇಳಿದರು.
ಖಾಲಿದ್ ಅವರ ಜಾಮೀನು ಅರ್ಜಿಯ ವಿಚಾರಣೆ ಆಗಸ್ಟ್ 23ರಂದು ಆರಂಭಗೊಂಡಿತ್ತು. ಮುಂದಿನ ವಿಚಾರಣೆ ಮುಂದಿನ ವರ್ಷದ ಜನವರಿ 5ಕ್ಕೆ ನಿಗದಿಯಾಗಿದೆ.