ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

ಬೆಂಗಳೂರು, ಡಿ.11: ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಝೂಮ್ ಸಂವಾದದ ಮೂಲಕ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಿಕೆಶಿ, ರಾಜಸ್ಥಾನದಲ್ಲಿ ಪಕ್ಷದ ಸಭೆ ಹಾಗೂ ಡಿ.13ರಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಸಮಯ ಅಭಾವದಿಂದ ಈ ಸದಸ್ಯತ್ವ ನೋಂದಣಿ ಅಭಿಯಾನವನ್ನು ಇಂದೇ ಆರಂಭಿಸಲಾಗುತ್ತಿದೆ. ಈ ಅಭಿಯಾನದ ನಂತರ ಬ್ಲಾಕ್, ಜಿಲ್ಲಾ ಹಾಗೂ ಕೆಪಿಸಿಸಿಯ ಚುನಾವಣೆ ನಡೆಯಬಹುದು. ಪಕ್ಷದ ಸದಸ್ಯತ್ವ ಪಡೆದ ನಂತರ ನೀವು ಈ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದರು..
ಇಂದು 2 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಇದೊಂದು ಇತಿಹಾಸದ ಪುಟ ಸೇರುವ ಕ್ಷಣ. ನಮಗೆ ಸಂಖ್ಯೆ ಕಡಿಮೆ ಇದ್ದರೂ ಪರವಾಗಿಲ್ಲ , ಬೋಗಸ್ ಸದಸ್ಯತ್ವ ಮಾತ್ರ ಬೇಡ. ನೀವು ಯಾರನ್ನು ಸದಸ್ಯರನ್ನಾಗಿ ಮಾಡುತ್ತೀರೋ ಅವರ ಬಳಿ ನೀವು ಫೋಟೋ ಪಡೆಯಬೇಕು. ಸಕ್ರಿಯ ಸದಸ್ಯತ್ವ ಪಡೆಯುವವರು ಕನಿಷ್ಠ 25 ಸದಸ್ಯತ್ವ ಮಾಡಿಸಬೇಕು. ಸಕ್ರಿಯ ಸದಸ್ಯರಿಗೆ ಮಾತ್ರ ವಿವಿಧ ಹಂತಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇರುತ್ತದೆ ಎಂದರು.
ಸದಸ್ಯರಾಗದೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ. "ಪ್ರತಿ ಬೂತ್ ಗೆ ಡಿಜಿಟಲ್ ಯೂತ್" ಎಂದು ಹೇಳಿರುವ ಹಾಗೆ ಅವರ ದೂರವಾಣಿ ಸಂಖ್ಯೆಯನ್ನು ಎಐಸಿಸಿಗೆ ನೀಡಲಿದ್ದು ಅವರುಗಳಿಗೆ ನಾಳೆಯಿಂದ ಆಪ್ ತೆರೆಯಲು ಅವಕಾಶ ನೀಡಲಾಗುತ್ತದೆ. ನಂತರ ಅವರು ಡಿಜಿಟಲ್ ಸದಸ್ಯತ್ವ ಮಾಡಿಸಬಹುದು ಎಂದು ಹೇಳಿದರು.
ಈ ಅಭಿಯಾನದಲ್ಲಿ ಭಾಗವಹಿಸುವವರು 1 ನಿಮಿಷದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು. ದಾಖಲೆ ದೃಷ್ಟಿಯಿಂದ ಇದು ಅಗತ್ಯ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಾಂಕೇತಕವಾಗಿ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡರು. ಎಐಸಿಸಿ ದತ್ತಾಂಶ ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಅವರು ಡಿ.ಕೆ. ಶಿವಕುಮಾರ್ ಜತೆಗಿದ್ದು, ಅಭಿಯಾನಕ್ಕೆ ಸಾಥ್ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಮಾಜಿ ಸಚಿವರಾದ ಚಕುವರಾಯಸ್ವಾಮಿ ಸೇರಿದಂತೆ ಎಲ್ಲ ಪ್ರಮುಖ ನಾಯಕರು ತಮ್ಮ ತಮ್ಮ ಬೂತ್ ಗಳಿಂದ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ಮೂಲೆ, ಮೂಲೆಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಕಡೆಗಳಿಂದ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಈ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿದರು. ಈ ಎಲ್ಲರೂ ಝೂಮ್ ಮೂಲಕ ಒಂದೇ ವೇದಿಕೆಗೆ ಸಂಪರ್ಕ ಪಡೆದಿದ್ದರು.
ದೇಶದ ನಿರ್ಮಾಣದಲ್ಲಿ ಕಾಂಗ್ರೆಸ್ ಪಾತ್ರ, ಪ್ರಸ್ತುತ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಹಾಗೂ ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಸೇರಬೇಕು ಎಂಬ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ದತ್ತಾಂಶ ಸಮಿತಿ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಮಾತನಾಡಿದರು.







