ಕ್ರಿಸ್‍ಮಸ್, ಹೊಸ ವರ್ಷ ಆಚರಣೆ: ರಾಜ್ಯ ಸರಕಾರ ಹೊರಡಿಸುವ ಮಾರ್ಗಸೂಚಿಗಳಿಗೆ ಬಿಬಿಎಂಪಿ ಬದ್ಧ

ಬೆಂಗಳೂರು, ಡಿ11: ಸದ್ಯ ನಗರದಲ್ಲಿ ಒಮೈಕ್ರಾನ್ ಹೊಸ ಪ್ರಕರಣ ಪತ್ತೆಯಾಗಿಲ್ಲ. ಆದುದರಿಂದ ಕ್ರಿಸ್‍ಮಸ್ ಮತ್ತು ಹೊಸವರ್ಷ ಆಚರಣೆಯ ಮಾರ್ಗಸೂಚಿ ಕುರಿತು ರಾಜ್ಯ ಸರಕಾರವೇ ನಿರ್ಧರಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಮಾತನಾಡಿದ ಅವರು, ಇದುವರೆಗೂ ಬಿಬಿಎಂಪಿಗೆ ಆಚರಣೆಯ ಕುರಿತು ಅನುಮತಿ ಕೋರಿ ಯಾವುದೇ ಮನವಿಗಳು ಬಂದಿಲ್ಲ. ಒಮೈಕ್ರಾನ್ ಸೋಂಕು ಪತ್ತೆಯಾಗದಿದ್ದರೂ, ಕೊರೋನ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಸರಕಾರ ನಿರ್ಧರಿಸಿ ಮಾರ್ಗಸೂಚಿ ಹೊರಡಿಸಬಹುದು. ಸರಕಾರದ ಮಾರ್ಗಸೂಚಿಗಳನ್ನೇ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಸಲಾಗುವುದು ಎಂದರು.
ಕೊರೋನ ಎರಡನೇ ಅಲೆ ಮುಗಿದ ಬಳಿಕ ಜನರಲ್ಲಿ ಲಸಿಕೆಯ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಮೂಡಿತ್ತು. ಆದರೆ, ಒಮೈಕ್ರಾನ್ ಸೋಂಕು ಪತ್ತೆಯಾದ ಬಳಿಕ ಮತ್ತೆ ಜನರಿಗೆ ಲಸಿಕೆ ಮಹತ್ವ ತಿಳಿಯಿತು. ಈಗಾಗಲೇ ನಗರದಲ್ಲಿ ಶೇ.70ರಷ್ಟು ಎರಡನೇ ಡೋಸ್ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನ ಪರೀಕ್ಷೆ ದರ ದುಬಾರಿಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದರೂ, ಬೇರೆ ರಾಜ್ಯಕ್ಕೆ ಹೋಲಿಸಿಕೊಂಡರೆ ನಮ್ಮ ರಾಜ್ಯದಲ್ಲಿ ದುಬಾರಿ ಇಲ್ಲ. ರಾಜ್ಯ ಸರಕಾರ ದರ ನಿಗದಿ ಮಾಡಿ, ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಬೂಸ್ಟರ್ ಡೋಸ್ ಬಗ್ಗೆ ಚರ್ಚೆ ಮಾಡುತ್ತಿದೆ. ರಾಜ್ಯ ಸರಕಾರದ ಪ್ರತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗುತ್ತಿದೆ. ಆದುದರಿಂದ ಬಿಬಿಎಂಪಿ ಯಾವುದೇ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ ಎಂದು ಅವರು ಹೇಳಿದರು.







