ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಸಮಪರ್ಕ ಯೋಜನೆ ಅಗತ್ಯ: ಶಾಸಕ ರಘುಪತಿ ಭಟ್

ಉಡುಪಿ, ಡಿ.11: ಅರಣ್ಯದಿಂದ ಆಕ್ಸಿಜನ್ ಅಗಾಧ ಪ್ರಮಾಣದಲ್ಲಿ ಉತ್ಪಾ ದನೆಯಾಗುತ್ತದೆ. ಆದುದರಿಂದ ಅರಣ್ಯ ಪ್ರದೇಶಗಳಲ್ಲಿ ಉತ್ತಮ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಹಮ್ಮಿಕೊಳ್ಳಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಕುಂದಾಪುರ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ಶನಿವಾರ ಉಡುಪಿಯ ಕಿದಿಯೂರು ಹೋಟೆಲ್ ಶೇಷಶಯನ ಹಾಲ್ನಲ್ಲಿ ಆಯೋಜಿಸಲಾದ ಹೊಸ ವರ್ಷದ ಡೈರಿ ಬಿಡುಗಡೆ ಹಾಗೂ ನಿವೃತ್ತ ಅರಣ್ಯ ರಕ್ಷಕರು ಮತ್ತು ವೀಕ್ಷಕರು ಹಾಗೂ ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾಡುಪ್ರಾಣಿಗಳ ಹಾವಳಿಯ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಮರಗಳನ್ನು ಕಡಿದು ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಉತ್ತೇಜನ ನೀಡಬೇಕಾಗಿದೆ. ಇದರಿಂದ ಕಾಡುಪ್ರಾಣಿಗಳು ನಾಡಿಗೆ ಬರುವ ಹಾವಳಿ ತಪ್ಪಲಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ 1 ಮರ ಕಡಿದರೆ 10 ಗಿಡಗಳನ್ನು ನೆಡುವ ವ್ಯವಸ್ಥೆಯಡಿ ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂದರು.
ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಾಲ್ಕರ್, ಕುಂದಾಪುರ ಪ್ರಾದೇಶಿಕ ವಿಭಾಗದ ಉಪರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಎಂ.ವಿ., ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್, ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಜಿ.ಡಿ.ದಿನೇಶ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಮಂಗಳೂರು ವೃತ್ತದ ರಾಜ್ಯ ಅರಣ್ಯ ರಕ್ಷಕ-ವೀಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಕೆ.ಎನ್., ರಾಜ್ಯ ಅರಣ್ಯ ರಕ್ಷಕ-ವೀಕ್ಷಕ ಸಂಘ ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದ ಗೌರವಾಧ್ಯಕ್ಷ ಎಚ್.ದೇವರಾಜ ಪಾಣ, ರಾಜ್ಯ ಅರಣ್ಯ ರಕ್ಷಕ-ವೀಕ್ಷಕ ಸಂಘ ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದ ಗೌರವ ಸಲಹೆಗಾರ ಗಣಪತಿ ನಾಯಕ್ ಉಪಸ್ಥಿತರಿದ್ದರು.
ರಾಜ್ಯ ಅರಣ್ಯ ರಕ್ಷಕ-ವೀಕ್ಷಕ ಸಂಘ ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದ ಅಧ್ಯಕ್ಷ ಕೇಶವ ಪೂಜಾರಿ ಎಂ.ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರವಿ ಸ್ವಾಗತಿಸಿದರು. ಖಜಾಂಚಿ ಸಂತೋಷ್ ಜೋಗಿ ವಂದಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.







