ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಲಿರುವ 'ಬೆಳಗಾವಿಯ ಚಳಿಗಾಲ ಅಧಿವೇಶನ'

ಫೈಲ್ ಚಿತ್ರ
ಬೆಂಗಳೂರು, ಡಿ. 11: ರಾಜ್ಯದ ಗಡಿ ಜಿಲ್ಲೆ ಕುಂದಾನಗರಿ ಬೆಳಗಾವಿಯಲ್ಲಿ ಡಿ.13ರಿಂದ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಕಲಾಪ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯೊಂದಿಗೆ ವಿದ್ಯುಕ್ತವಾಗಿ ಆರಂಭವಾಗಲಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಬಿಸಿ ಬಿಸಿ ಚರ್ಚೆ, ವಾಗ್ವಾದಕ್ಕೆ ವೇದಿಕೆ ಸಜ್ಜುಗೊಂಡಿದೆ.
ಈ ಮಧ್ಯೆ ಕೃಷಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ರೈತರ ಪ್ರತಿಭಟನೆಯೂ ಸೇರಿದಂತೆ ವಿವಿಧ ಹೋರಾಟಗಳು ನಡೆಯಲಿವೆ.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ನೀಡುವಲ್ಲಿನ ಸರಕಾರ ವೈಫಲ್ಯ, ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.40ರಷ್ಟು ಕಮಿಷನ್ ವಸೂಲಿ ಆರೋಪ, ಬಿಟ್ ಕಾಯಿನ್ ಹಗರಣ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಭಿವೃದ್ಧಿಯಲ್ಲಿ `ಕಿತ್ತೂರು ಕರ್ನಾಟಕ’ ಮತ್ತು `ಕಲ್ಯಾಣ ಕರ್ನಾಟಕ' ಭಾಗದ ನಿರ್ಲಕ್ಷ್ಯ ಸೇರಿದಂತೆ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ.
ಶೇ.40ರಷ್ಟು ಕಮಿಷನ್ ಆರೋಪ: ಅಕಾಲಿಕ ಮಳೆಯಿಂದಾಗಿ ರಾಜ್ಯಾದ್ಯಂತ 10 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಬೆಳೆ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಇದಕ್ಕೆ ಪ್ರತಿಯಾಗಿ ಸರಕಾರದಿಂದ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಿಲ್ಲ. ಬಿಟ್ ಕಾಯಿನ್ ವಿವಾದ ಸಿಎಂ ಬೊಮ್ಮಾಯಿ ಸೇರಿದಂತೆ ಸರಕಾರದ ಹಲವು ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಜೊತೆಗೆ ಸರಕಾರಿ ಕಾಮಗಾರಿಗಳ ಗುತ್ತಿಗೆಗೆ ಶೇ.40ರಷ್ಟು ಕಮಿಷನ್ ನೀಡಬೇಕೆಂಬ ಗುತ್ತಿಗೆದಾರರ ಆರೋಪ ವಿಚಾರ ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಈ ಮಧ್ಯೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ ಅಧಿಕಾರಿಗಳ ಭ್ರಷ್ಟಾಚಾರ, ಕೋವಿಡ್ ರೂಪಾಂತರಿ ಒಮೈಕ್ರಾನ್ ಆತಂಕದ ಜೊತೆಗೆ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಘೋಷಿಸಿದ್ದ ಕೋವಿಡ್ ಪರಿಹಾರ ವಿತರಣೆ ವಿಳಂಬ ಹಾಗೂ ರೈತರು, ಕೋವಿಡ್ ಸಂತ್ರಸ್ತರು, ಬಡ-ಮಧ್ಯದ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳು ಅಧಿವೇಶನದಲ್ಲಿ ಚರ್ಚಿಸಲು ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಈ ನಡುವೆ ವಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಸಚಿವರು, ಶಾಸಕರು ಸನ್ನದ್ಧರಾಗಿದ್ದಾರೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶವೂ ಡಿ.14ರಂದು ಬರಲಿದ್ದು, ಗೆಲುವಿನ ಉಮೇದಿಯಲ್ಲಿರುವ ಬಿಜೆಪಿ, ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳಲು ಫಲಿತಾಂಶವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ.
ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಚಳಿಗಾಲದ ಅಧಿವೇಶನದಲ್ಲಿ ಒತ್ತು ನೀಡಲಾಗುವುದು ಎಂದು ಈಗಾಗಲೇ ಸ್ಪೀಕರ್ ಕಾಗೇರಿ ಪ್ರಕಟಿಸಿದ್ದು, ಕೃಷ್ಣಾ, ಮಹದಾಯಿ ಸೇರಿದಂತೆ ಆ ಭಾಗದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಚರ್ಚೆ ಮತ್ತು ಆ ಭಾಗದ ಸಮಸ್ಯೆಗಳಿಗೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಸದನ ವೇದಿಕೆಯಾಗಲಿದೆ.
ಒಮೈಕ್ರಾನ್ ಆತಂಕ: ಕೋವಿಡ್ ರೂಪಾಂತರಿ ಒಮೈಕ್ರಾನ್ ಆತಂಕದ ನಡುವೆ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಕಲಾಪದಲ್ಲಿ ಪಾಲ್ಗೊಳ್ಳುವವರಿಗೆ ಎರಡು ಡೋಸ್ ಕೋವಿಡ್ ಲಸಿಕೆ ಮತ್ತು ಎಪ್ಪತ್ತೆರಡು ಗಂಟೆಯೊಳಗಿನ ಆರ್ಟಿಪಿಸಿಆರ್ ನೆಗೆಟಿವ್ ಕಡ್ಡಾಯವೆಂದು ಜಿಲ್ಲಾಡಳಿತ ಪ್ರಕಟಿಸಿದೆ. ಹೀಗಾಗಿ ಶಾಸಕರು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಅಧಿವೇಶದಲ್ಲಿ ಕಲಾಪಕ್ಕೆ ಹಾಜರುವ ಎಲ್ಲರೂ ವಲ್ಲದ ಮನಸ್ಸಿನಿಂದಲೇ ಬೆಳಗಾವಿಯತ್ತ ಮುಖ ಮಾಡಿದ್ದಾರೆ.
ಟೌನ್ಶಿಪ್ ನಿರ್ಮಾಣ: ಗಡಿ ಜಿಲ್ಲೆಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು, 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಓರ್ವ ನಗರ ಪೊಲೀಸ್ ಆಯುಕ್ತ, ಇಬ್ಬರು ಡಿಸಿಪಿ, 15 ಎಸ್ಪಿ, 35 ಡಿವೈಎಸ್ಪಿ, 100 ಸಿಪಿಐ, 250 ಪಿಎಸ್ಸೈ, ಗೃಹ ರಕ್ಷಕ ದಳ ಸೇರಿದಂತೆ ನಾಲ್ಕು ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಗೆ ಊಟ, ಉಪಾಹಾರ, ವಸತಿ ವ್ಯವಸ್ಥೆಗೆ ಸುವರ್ಣ ವಿಧಾನಸೌಧದ ಸಮೀಪದಲ್ಲೇ ಜರ್ಮನ್ ಮಾದರಿ ಟೌನ್ ಶಿಪ್ ನಿರ್ಮಿಸಲಾಗಿದೆ. ಮೂರು ಟೆಂಟ್ಗಳಲ್ಲಿ 1,800 ಸಿಬ್ಬಂದಿಗಳಿಗೆ ಹಾಸಿವೆ ವ್ಯವಸ್ಥೆ ಮಾಡಲಾಗಿದೆ. ಸಾಂಬ್ರಾ ಟ್ರೈನಿಂಗ್ ಸ್ಕೂಲ್ನಲ್ಲಿ 500, ಮರಾಠ ರೆಜಿಮೆಂಟ್ನಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.









