ಪಂಜಾಬ್ ಚುನಾವಣೆಗೆ ಮೊದಲು ಹರ್ಭಜನ್,ಯುವರಾಜ್ ಸಿಂಗ್ ಬಿಜೆಪಿಗೆ ಸೇರ್ಪಡೆ?

ಹೊಸದಿಲ್ಲಿ: ಪಂಜಾಬ್‌ನಲ್ಲಿ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಾರ್ವಜನಿಕ ರಂಗದ ಕೆಲವು ಪ್ರಮುಖ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನೋಡುತ್ತಿದೆ. ಬಿಜೆಪಿ ಪಕ್ಷದ ಅಂತಹದ್ದೊಂದು ಪಟ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಇದ್ದಾರೆ ಎಂದು ವರದಿಯೊಂದು ತಿಳಿಸಿದೆ.
Free press journal.in ಗೆ ಈ ಸುದ್ದಿಯನ್ನು ದೃಢಪಡಿಸಿದ ಬಿಜೆಪಿಯ ಹಿರಿಯ ನಾಯಕರೊಬ್ಬರು "ಹೌದು, ನಾವು ಅವರನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದ್ದೇವೆ. ಏನಾಗುತ್ತದೆ ನೋಡೋಣ" ಎಂದರು.
ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದ ಮಾಜಿ ಕ್ರಿಕೆಟಿಗರನ್ನು ಬಿಜೆಪಿ ಕೇಳಬಹುದು ಹಾಗೂ ಅವರು ಸ್ಪರ್ಧಿಸಲು ಒಪ್ಪದಿದ್ದರೆ, ಬಿಜೆಪಿ ಪಕ್ಷವು ಪ್ರಚಾರ ಮಾಡಲು ಅವರನ್ನು ಕೇಳಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಏತನ್ಮಧ್ಯೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನ ಎಲ್ಲಾ 117 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಕಳೆದ ತಿಂಗಳು ಹೇಳಿದ್ದರು. ಆದಾಗ್ಯೂ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಪಕ್ಷವು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ.
ಇತ್ತೀಚೆಗೆ ಬಿಜೆಪಿ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ ಶಿರೋಮಣಿ ಅಕಾಲಿ ದಳ (ಸಂಯುಕ್ತ) ಪಕ್ಷದೊಂದಿಗಿನ ಮೈತ್ರಿಗೆ ಸಂಬಂಧಿಸಿದಂತೆ ನಿರ್ಧಾರವನ್ನು "ತಾತ್ವಿಕವಾಗಿ" ತೆಗೆದುಕೊಳ್ಳಲಾಗಿದೆ ಹಾಗೂ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಿಂಗ್ ಹೇಳಿದ್ದರು.