ಸಾಮಾನ್ಯ ವ್ಯಕ್ತಿಯ ಸೇವೆಯನ್ನು ಸಮಾಜ ಗುರುತಿಸುತ್ತಿರುವುದು ಕಂಡು ಕಣ್ತುಂಬಿ ಬರುತ್ತದೆ: ಪದ್ಮಶ್ರೀ ಹರೆಕಳ ಹಾಜಬ್ಬ

ಚಿಕ್ಕಮಗಳೂರು, ಡಿ.11: ಸಾಮಾನ್ಯ ವ್ಯಕ್ತಿಯಾಗಿರುವ ನಾನು ನನ್ನೂರಿನ ಮಕ್ಕಳು ನನ್ನಂತೆ ಅನಕ್ಷರಸ್ಥರಾಗಬಾರದೆಂಬ ಏಕೈಕ ಉದ್ದೇಶದಿಂದ ಶಾಲೆ ಆರಂಭಿಸಲು ನಾನು ಗಳಿಸಿದ್ದನ್ನು ವಿನಿಯೋಗಿಸಿದ್ದೆ. ಸಾಮಾನ್ಯ ವ್ಯಕ್ತಿಯ ಈ ಸಣ್ಣ ಸೇವೆಯನ್ನು ಸದ್ಯ ಸರಕಾರ ಸೇರಿದಂತೆ ಎಲ್ಲರೂ ಗುರುತಿಸುತ್ತಿರುವುದು, ನನ್ನ ಕನಸಿನ ಸಾಕಾರಕ್ಕೆ ಸಹಕಾರ ನೀಡುತ್ತಿರುವುದನ್ನು ಕಂಡು ಕಣ್ತುಂಬಿ ಬರುತ್ತಿದೆ ಎಂದು ಅಕ್ಷರಸಂತ, ಪದ್ಮಶ್ರೀ ಹರೆಕಳ ಹಾಜಬ್ಬ ಭಾವುಕರಾಗಿ ನುಡಿದರು.
ಜಿಲ್ಲಾ ಬ್ಯಾರಿಗಳ ಒಕ್ಕೂಟ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಸಹರಾ ಶಾದಿ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಡತನದಲ್ಲಿ ಬೆಳೆದ ನಾನು ಅಕ್ಷರ ಕಲಿಯಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಮಂಗಳೂರಿನಲ್ಲಿ ಕಿತ್ತಳೆಹಣ್ಣು ಮಾರುತ್ತಿದ್ದ ವೇಳೆ ಸಾಕಷ್ಟು ಮುಜುಗರದ ಸಂದರ್ಭಗಳನ್ನು ಎದುರಿಸಿದ್ದೆ. ಆಗ ಶಿಕ್ಷಣದ ಮಹತ್ವ ಅರಿವಿಗೆ ಬರಲಾರಂಭಿಸಿದ್ದು, ನನ್ನೂರಿನಲ್ಲಿ ಒಂದು ಶಾಲೆ ಆರಂಭಿಸಬೇಕು, ನನ್ನೂರಿನ ಬಡ ಮಕ್ಕಳಿಗೆ ಅಕ್ಷರ ಕಲಿಸಬೇಕೆಂದು ಅಂದೇ ನಿರ್ಧಾರ ಮಾಡಿದ್ದೆ. ಇದಕ್ಕಾಗಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಹಣವನ್ನು ಶಾಲೆ ಆರಂಭಿಸಲು ವಿನಿಯೋಗಿಸಿದೆ. ಸದ್ಯ ನಾನು ಆರಂಭಿಸಿದ ಶಾಲೆ ಸುಸಜ್ಜಿತ ಕಟ್ಟಡದೊಂದಿಗೆ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ನನ್ನೂರಿನ ಮಕ್ಕಳು ಅಕ್ಷರ ಕಲಿತು ದೊಡ್ಡ ಮನುಷ್ಯರಾಗುತ್ತಿದ್ದಾರೆ. ನನ್ನ ಕೆಲಸವನ್ನು ಗುರುತಿಸಿ ಶಾಲೆಯ ಅಭಿವೃದ್ಧಿಗೆ ಸರಕಾರ ಸೇರಿದಂತೆ ಸಂಘ ಸಂಸ್ಥೆಗಳು ಸದ್ಯ ನೆರವು ನೀಡುತ್ತಿದ್ದಾರೆ. ಜನರ ಸಹಕಾರ ಕಂಡು ಕಣ್ತುಂಬಿ ಬರುತ್ತಿದೆ ಎಂದರು.
ಶಾಲೆ ಆರಂಭಿಸುವ ಕನಸು ಕಂಡಿದ್ದ ನಾನು ಆರಂಭದಲ್ಲಿ ಸಾಕಷ್ಟು ಕಚೇರಿಗಳಿಗೆ ಅಲೆದಾಡಿದ್ದೇನೆ. ನಮ್ಮ ಕ್ಷೇತ್ರದ ಶಾಸಕರು, ಉನ್ನತ ಅಧಿಕಾರಿಗಳನ್ನು ಭೇಟಿಮಾಡಿ ನನ್ನೂರಿಗೆ ಶಾಲೆಬೇಕೆಂದು ಅವರ ಮನವೊಲಿಸಿದ್ದೆ. ನಂತರ 1999ರಲ್ಲಿ ನನ್ನೂರಿಗೆ ಸರಕಾರಿ ಶಾಲೆ ಮಂಜೂರಾಯಿತು. ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಂತ ಕಟ್ಟಡ ಇರಲಿಲ್ಲ, ಆಗ ಗ್ರಾಮದಲ್ಲಿದ್ದ ಮಸೀದಿಯೊಂದರ ಕಮಿಟಿ ಸದಸ್ಯರ ಬಳಿ ಮನವಿ ಮಾಡಿಕೊಂಡಾಗ ಅವರು ಮಸೀದಿ ಬಳಿಯ ಜಾಗದಲ್ಲಿ ಶಾಲೆ ಆರಂಭಿಸಲು ಸಹಕಾರ ನೀಡಿದರು. ಅಂದು ಗ್ರಾಮದಲ್ಲಿ ಪ್ರಥಮ ಬಾರಿಗೆ ಬಾರಿಗೆ 28 ಮಕ್ಕಳೊಂದಿಗೆ ಶಾಲೆ ಆರಂಭವಾಯ್ತು. ನನ್ನ ಮಗಳನ್ನೂ ಅದೇ ಶಾಲೆಗೆ ಸೇರಿಸಿದ್ದರಿಂದ ನಾನು ಶಾಲೆಯ ಎಸ್‍ಡಿಎಂಸಿ ಸದಸ್ಯನಾಗಲು ಸಾಧ್ಯವಾಯಿತು. ನಂತರ ಶಾಲೆಗೆ ಸ್ವಂತ ಕಟ್ಟಡಕ್ಕಾಗಿ ರಾಜಕಾರಣಿಗಳು, ಅಧಿಕಾರಿಗಳ ಬಳಿಗೆ ಅಲೆದಾಡಿದ್ದರ ಫಲವಾಗಿ ಸರಕಾರ ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಜಾಗ, ಅನುದಾನ ಮಂಜೂರು ಮಾಡಿದ್ದು, ಇದರೊಂದಿಗೆ ಅನೇಕ ದಾನಿಗಳ ನೆರವಿನೊಂದಿಗೆ ಶಾಲೆಯ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿದೆ. ನನ್ನ ಈ ಕಾರ್ಯಕ್ಕೆ ನೆರವು, ಸಹಕಾರ ನೀಡಿದ ಎಲ್ಲರ ಕೊಡುಗೆಗಳನ್ನು ನಾನು ಮರೆಯುವುದಿಲ್ಲ ಎಂದರು.
ಕಡುಬಡತನದ ಕಾರಣಕ್ಕೆ ನಾನು ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ನನ್ನಂತೆ ನಮ್ಮೂರಿನ ಮಕ್ಕಳೂ ಆಗುಬಾರದು ಎಂದು ನನ್ನೂರಿನಲ್ಲಿ ಶಾಲೆ ನಿರ್ಮಾಣಕ್ಕೆ ಕಿತ್ತಳೆಹಣ್ಣು ಮಾರಾಟ ಮಾಡಿದ ಹಣವನ್ನೂ ವಿನಿಯೋಗಿಸಿ ಶಾಲೆ ಆಗಲೇಬೇಕೆಂದು ಪಣತೊಟ್ಟಿದ್ದರಿಂದ ಅನೇಕ ಕಷ್ಟಗಳು ಎದುರಾದರೂ ತಾಳ್ಮೆಯಿಂದ ಹಠಸಾಧನೆಗೆ ಶ್ರಮಿಸಿದ್ದರಿಂದ ನನ್ನ ಕನಸು ನನಸಾಯ್ತು. ಸದ್ಯ ಸರಕಾರ, ಅಧಿಕಾರಿಗಳು, ಸಾರ್ವಜನಿಕರು, ಸಂಘಸಂಸ್ಥೆಗಳು ನನ್ನ ಸೇವೆಯನ್ನು ಕೊಂಡಾಡುತ್ತಿದ್ದು, ಇದನ್ನು ನಾನು ಎಂದೂ ನಿರೀಕ್ಷೆ ಮಾಡಿರಲಿಲ್ಲ. ಆದರೂ ಸರಕಾರ ನನಗೆ ಪದ್ಮಶ್ರೀಯಂತಹ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿತ್ತ ಸಚಿವೆ ಸೇರಿದಂತೆ ದೇಶದ ಮಹಾನ್ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪಡೆಯುವಂತಹ ಗೌರವವನ್ನು ನನ್ನ ಶಾಲೆ ನನಗೆ ಕಲ್ಪಿಸಿತು ಎಂದು ಭಾವುಕರಾಗಿ ನುಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೆ.ಮುಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಹರೆಕಳ ಹಾಜಪ್ಪ ಅವರು ಅಕ್ಷರಜ್ಞಾನ ಇಲ್ಲದವರು. ಅವರ ಸರಳ ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸೇವೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟಿದೆ. ಮಂಗಳೂರಿನಲ್ಲಿ ಕಿತ್ತಳೆಹಣ್ಣು ವ್ಯಪಾರ ಮಾಡುತ್ತಿದ್ದ ಸಂದರ್ಭದಲ್ಲಿ ವಿದೇಶಿಗರೊಬ್ಬರು ಈ ಹಣ್ಣಿನ ಬೆಲೆ ಎಷ್ಟು ಎಂದು ಇಂಗ್ಲೀಷ್‍ನಲ್ಲಿ ಕೇಳಿದಾಗ ಹಾಜಬ್ಬ ಅವರಿಗೆ ಭಾಷೆ ಅರ್ಥ ವಾಗದೆ ಪಕ್ಕದಲ್ಲಿದ್ದವರಿಂದ ಕೇಳಿ ತಿಳಿದುಕೊಂಡರು. ಇದರಿಂದ ಮುಜುಗರಕ್ಕೊಳಗಾದ ಅವರು ಬೇಸರಗೊಂಡ ನನ್ನ ಪರಿಸ್ಥಿತಿ ನಮ್ಮೂರಿನ ಮಕ್ಕಳಿಗೆ ಬರಬಾರದು, ನನ್ನೂರಿನ ಮಕ್ಕಳೆಲ್ಲ ಶಿಕ್ಷಣ ವಂತರಾಬೇಕು ಎಂದು ಕಿತ್ತಳೆಹಣ್ಣು ಮಾರಿ ಬಂದ ಹಣದಿಂದ ಶಾಲೆ ಪ್ರಾರಂಭಿಸಲು ಶ್ರಮಿಸಿದರು. 1999ರಲ್ಲಿ 1ನೇ ತರಗತಿ ಆರಂಭವಾಗಿ ಈಗ 175 ಮಕ್ಕಳು ಓದುತ್ತಿರುವ ಶಾಲೆಯಾಗಿದೆ. ಅಕ್ಷರ ಜ್ಞಾನ ಇಲ್ಲದ ಸಂತನೊಬ್ಬ ಆರಂಭಿಸಿದ ಈ ಶಾಲೆ ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಾ ದೇಶ, ವಿದೇಶಗಳಲ್ಲೂ ಹೆಸರು ಮಾಡುತ್ತಿದೆ ಎಂದರು.
ಹಾಜಬ್ಬ ಅವರ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ದೇಶದ ಶ್ರೇಷ್ಟ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯೂ ಅವರನ್ನು ಹುಡುಕಿ ಬಂದಿದೆ. ಅಕ್ಷರಜ್ಞಾನ ಇಲ್ಲದ ವ್ಯಕ್ತಿಯೊಬ್ಬರು ಈ ಪ್ರಶಸ್ತಿ ಪಡೆಯುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಪ್ರಪಂಚದ ಅರಿವಿಲ್ಲದ ಅವರ ಹೆಸರು ಈಗ ಪ್ರಪಂಚದಾದ್ಯಂತ ಖ್ಯಾತಿ ಪಡೆದಿದೆ. ಹಾಜಬ್ಬ ಅವರು ಈ ಸಾಧನೆ ಮಾಡಲು ಹಣ, ಸಮಾಜ ಸೇವೆಯ ಹಿನ್ನೆಲೆಯೇ ಇರಲಿಲ್ಲ. ಆದರೆ ಶಾಲೆ ಕಟ್ಟಬೇಕೆಂಬ ನಿಸ್ವಾರ್ಥ ಮನೋಭಾವ ಅವರನ್ನು ಓರ್ವ ಸಾಧಕರನ್ನಾಗಿ ಮಾಡಿದೆ. ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ಅವರು ಮುಸ್ಲಿಂ ಸಮುದಾಯಕ್ಕೆ ಅಪಾರ ಗೌರವ ತಂದು ಕೊಟ್ಟಿದ್ದು, ಹಾಜಬ್ಬ ಸಮುದಾಯದ ಹೆಮ್ಮೆ ಆಗಿದ್ದಾರೆ ಎಂದರು.
ಪತ್ರಕರ್ತ ಗುರುವಪ್ಪ ಬಾಳೆಪುನಿ ಮಾತನಾಡಿ, ಹಾಜಬ್ಬ ಅವರು ಜಾತಿ, ಧರ್ಮ ಮೀರಿ ಬೆಳೆದ ವ್ಯಕ್ತಿತ್ವದವರು. ಅವರ ಸರಳ ಜೀವನ, ಮುಗ್ಧಮನಸ್ಸು, ನಿಸ್ವಾರ್ಥ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಆಸ್ತಿ, ಹಣ, ಸಂಪತ್ತಿನಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ, ಆದರೆ ಗುಣದಿಂದ ದೊಡ್ಡವರಾಗಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಹರೆಕಳ ಹಾಜಬ್ಬ. ಅಕ್ಷರಜ್ಞಾನವಿಲ್ಲದ ಸಾಧಕರೊಬ್ಬರ ಈ ಸಾಧನೆ ಮೂರು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದೆ. ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಜಿಲ್ಲಾ ಬ್ಯಾರಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಕೆ.ಇಬ್ರಾಹೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಪಿ ಪಕ್ಷದ ಮುಖಂಡ ಜಾಕಿರ್ ಹುಸೈನ್ ಮಾತನಾಡಿದರು. ಸಂಘದ ಸದಸ್ಯರಾದ ಕಿರುಗುಂದ ಅಬ್ಬಾಸ್, ಅಬೂಬಕರ್ ಸಿದ್ದಿಕಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಯೂಸೂಫ್ ಹಾಜಿ, ಜಂಶೀದ್‍ಖಾನ್, ಅಕ್ರಮ್ ಹಾಜಿ, ವಾಹೀದ್ ಅಮದ್, ಸಿ.ಜೆ.ಪಾಶ, ಫಾರೂಕ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಸಂಘಟನೆಗಳಿಂದ ಪದ್ಮಶ್ರೀ ಹರೆಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ದೇಶದ ಸ್ವಾತಂತ್ರ್ಯ ಸೇರಿದಂತೆ ಸಾಮಾಜಿ, ಆರ್ಥಿಕ, ಧಾರ್ಮಿಕ ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಮುಸ್ಲಿಂ ಸಮುದಾಯ ತನ್ನದೇಯಾದ ಕೊಡುಗೆ ನೀಡಿದೆ. ದೇಶಕ್ಕಾಗಿ ಸಾವಿರಾರು ನಾಯಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಗೆ ಮುಸ್ಲಿಂ ಸಮುದಾಯ ಕೊಡುಗೆ ಅಪಾರ. ಪ್ರಸಕ್ತ ದೇಶದ ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಹರೆಕಳ ಹಾಜಬ್ಬ ಅವರ ಕೊಡುಗೆ ಸ್ಮರಣೀಯ. ಹಾಜಬ್ಬ ಮುಸ್ಲಿಂ ಸಮುದಾಯದ ಹೆಮ್ಮೆಯಾಗಿದ್ದಾರೆ. ಶಿಕ್ಷಣದ ಮಹತ್ವ ಸಾರಿರುವ ಅವರ ಜೀವನ ಸಾಧನೆ ಎಲ್ಲರಿಗೂ ಮಾದರಿಯಾಗಲಿದೆ.
- ಜಾಕಿರ್ ಹುಸೇನ್, ಬಿಎಸ್ಪಿ ಮುಖಂಡ
ನಾನು ಕಿತ್ತಳೆಹಣ್ಣು ಮಾರುವ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ. 1 ರುಪಾಯಿಗೂ ನಾನು ಬೆಲೆ ಬಾಳುವುದಿಲ್ಲ. ಇಂತಹ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. ನಾನು ಆರಂಭಿಸಿದ ಶಾಲೆಯೇ ನನಗೆ ಈ ಗೌರವ ತಂದು ಕೊಟ್ಟಿರುವುದು ಅತ್ಯಂತ ಸಂತಸವಾಗಿದೆ. ಸಾಮಾನ್ಯ ವ್ಯಕ್ತಿಗಳ ಸೇವೆಯನ್ನು ಗುರುತಿಸುವ ಕೆಲಸ ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
- ಪದ್ಮಶ್ರೀ ಹರೆಕಳ ಹಾಜಬ್ಬ
ಸನ್ಮಾನ ಸಂದರ್ಭವೂ ಸರಳತೆ ಮೆರೆದ ಹಾಜಬ್ಬ: ಹರೇಕಳ ಹಾಜಬ್ಬ ಅತ್ಯಂತ ಸರಳ, ಮುಗ್ಧ ವ್ಯಕ್ತಿದವರು ಎಂಬುದನ್ನು ಇದುವರೆಗೆ ಚಿಕ್ಕಮಗಳೂರಿನ ಜನತೆ ಭಾಷಣಗಳಲ್ಲಿ, ಪತ್ರಿಕೆಗಳಲ್ಲಿ ಓದಿ, ಕೇಳಿದ್ದರು. ಆದರೆ ಶನಿವಾರ ಚಿಕ್ಕಮಗಳೂರಿಗೆ ಆಗಮಿಸಿದ್ದ ಅವರ ಸರಳತೆಯನ್ನು ಸಭಾಂಗಣದಲ್ಲಿದ್ದ ಜನರು ಸ್ವತಃ ಕಣ್ಣಾರೆ ಕಾಣುವಂತಾಯಿತು. ಕಾರ್ಯಕ್ರಮದ ಮಧ್ಯೆ ಆಯೋಜಕರು ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮಕ್ಕೆಂದು ವೇದಿಕೆ ಮುಂದೆ ಐಷಾರಾಮಿ ಕುರ್ಚಿಯನ್ನು ಇಡಲು ಮುಂದಾಗಿದ್ದರು. ಈ ವೇಳೆ ವೇದಿಕೆಯಿಂದ ಎದ್ದು ನಿಂತ ಹಾಜಬ್ಬ ಆ ಕುರ್ಚಿಯಲ್ಲಿ ಕೂರಲು ಮುಜುಗರ ಆಗುತ್ತದೆ, ಆ ಕುರ್ಚಿಯಲ್ಲಿ ಕೂರಲ್ಲ ಎಂದು ಪಟ್ಟು ಹಿಡಿದು ಕುರ್ಚಿಯನ್ನು ಅಲ್ಲಿಂದ ತೆರವು ಮಾಡಿಸಿದರು. ಬೇರೆ ದಾರಿ ಕಾಣದೇ ಆಯೋಜಕರು ವೇದಿಕೆ ಮುಂದೆ ಸಾಮಾನ್ಯ ಕುರ್ಚಿಯೊಂದನ್ನು ತಂದಿಟ್ಟ ಬಳಿಕ ಹಾಜಬ್ಬ ಆ ಕುರ್ಚಿ ಮೇಲೆ ಕುಳಿತು ಸನ್ಮಾನ ಸ್ವೀಕರಿಸಿದರು.







