ಅಮೆರಿಕ: ಸುಂಟರಗಾಳಿಗೆ ಕನಿಷ್ಟ 50 ಮಂದಿ ಸಾವು; ವ್ಯಾಪಕ ನಾಶ-ನಷ್ಟ

ಸಾಂದರ್ಭಿಕ ಚಿತ್ರ:PTI
ವಾಷಿಂಗ್ಟನ್, ಡಿ.11: ಆಗ್ನೇಯ ಅಮೆರಿಕದ ಕೆಂಟುಕಿ ರಾಜ್ಯದಲ್ಲಿ ಬೀಸಿದ ಸುಂಟರಗಾಳಿಯಿಂದ ಕನಿಷ್ಟ 50 ಮಂದಿ ಬಲಿಯಾಗಿದ್ದು ಹಲವು ಪ್ರದೇಶಗಳಲ್ಲಿ ವ್ಯಾಪಕ ನಾಶ-ನಷ್ಟ ಉಂಟಾಗಿದೆ ಎಂದು ಕೆಂಟುಕಿಯಗವರ್ನರ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಗಂಟೆಗೆ 200 ಮೈಲು ವೇಗದಲ್ಲಿ ಬೀಸಿದ ಸುಂಟರಗಾಳಿಯಿಂದ ಕೆಂಟುಕಿಯ ಹಲವು ಪ್ರಾಂತಗಳು ಹಾನಿಗೊಳಗಾಗಿವೆ. ಸುಮಾರು 100ರಷ್ಟು ಮಂದಿ ಸಾವನ್ನಪ್ಪಿರುವ ಸಾಧ್ಯತೆಯಿದೆ. ಕೆಂಟುಕಿ ರಾಜ್ಯದ ಇತಿಹಾಸದಲ್ಲಿಯೇ ಇದು ಅತ್ಯಂತ ವಿನಾಶಕಾರಿ ಸುಂಟರಗಾಳಿಯಾಗಿದೆ. ಮೇಫೀಲ್ಡ್ ನಗರದಲ್ಲಿ ಫ್ಯಾಕ್ಟರಿಯೊಂದರ ಛಾವಣಿ ಕುಸಿದು ಬಿದ್ದಿದ್ದು, ಹೆಚ್ಚಿನ ಸಾವು ಈ ದುರಂತದಲ್ಲಿ ಸಂಭವಿಸಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಗವರ್ನರ್ ಆ್ಯಂಡಿ ಬೆಶಿಯರ್ ಹೇಳಿದ್ದಾರೆ. ಅಮೆರಿಕದ ಹಲವು ನಗರಗಳಲ್ಲಿ ಸುಂಟರಗಾಳಿಯ ಆರ್ಭಟವಿತ್ತು ಎಂದು ಮೂಲಗಳು ಹೇಳಿವೆ.
ಶುಕ್ರವಾರ ಇಲಿನಾಯಿಸ್ ರಾಜ್ಯದಲ್ಲಿ ತೀವ್ರ ಸುಂಟರ ಗಾಳಿ ಬೀಸಿದ್ದು ಅಮಝಾನ್ ಸಂಸ್ಥೆಯ ಗೋದಾಮು ಕುಸಿದು ಬಿದ್ದು ಅದರೊಳಗೆ ಸುಮಾರು 100 ಉದ್ಯೋಗಿಗಳು ಸಿಲುಕಿದ್ದರು. ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಅಪಾಯದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯದಲ್ಲಿ ಪೊಲೀಸರು ಮತ್ತು ಇಲಿನಾಯಿಸ್ ತುರ್ತು ಪರಿಸ್ಥಿತಿ ನಿರ್ವಹಣೆ ವಿಭಾಗ ಜತೆಗೂಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಲಿನಾಯಿಸ್ ಗವರ್ನರ್ ಜೆಬಿ ಪ್ರೈಝರ್ ಹೇಳಿದ್ದಾರೆ.
ಅರ್ಕನ್ಸಾಸ್ ರಾಜ್ಯದಲ್ಲಿ ಬೀಸಿದ ಸುಂಟರಗಾಳಿಯಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಸುಂಟರಗಾಳಿಯಿಂದ ಆಸ್ಪತ್ರೆಯ ಛಾವಣಿ ಕುಸಿದಿದ್ದು ಆಸ್ಪತ್ರೆಯೊಳಗೆ 20 ಮಂದಿ ಸಿಕ್ಕಿಬಿದ್ದಿದ್ದಾರೆ. ಟೆನ್ನೆಸ್ಸೀ ರಾಜ್ಯದಲ್ಲಿ ಸುಂಟರಗಾಳಿಯಿಂದ ಕನಿಷ್ಟ 2 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.







