ದಲಿತರು, ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಸುಂದರ್ ಮಾಸ್ತರ್

ಉಡುಪಿ, ಡಿ.11: ಈ ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿವೆ. ಅವರ ಘನತೆಯ ಮೇಲೆ ಹಲ್ಲೆ ನಡೆಸುವ ಯತ್ನಗಳು ಸಾಗುತ್ತಿವೆ. ಇದು ಸದ್ಯ ದೇಶದಲ್ಲಿ ನಡೆಯುತ್ತಿರುವ ಅತೀ ದೊಡ್ಡ ಮಾನವ ಹಕ್ಕು ಉಲ್ಲಂಘನೆಯ ನಿದರ್ಶನಗಳಾಗಿವೆ ಎಂದು ದಲಿತ ಮುಖಂಡ ಸುಂದರ್ ಮಾಸ್ತರ್ ಹೇಳಿದ್ದಾರೆ.
ಅವರು ಮಾನವ ಹಕ್ಕು ದಿನದ ಅಂಗವಾಗಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಉಡುಪಿ ಜಿಲ್ಲಾ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಆಯೋಜಿಸಲಾದ ಪ್ರಭುತ್ವದ ದೌರ್ಜನ್ಯದಿಂದಾಗಿ ದೇಶದಲ್ಲಿ ಮಡಿದ ನಾಗರಿಕರಿಗೆ ಮತ್ತು ರೈತ ಚಳುವಳಿಯಲ್ಲಿ ಮೃತಪಟ್ಟ ರೈತರಿಗೆ ಸಂತಾಪ ಸೂಚಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮೋದಿ ಸರಕಾರ ಬಂದ ಮೇಲೆ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಅತೀ ಹೆಚ್ಚಾಗಿದೆ. ಉತ್ತರ ಪ್ರದೇಶದ ಯೋಗಿ ಸರಕಾರವನ್ನು ಮೋದಿ ಪ್ರಶಂಸಿಸುತ್ತಾರೆ. ಆದರೆ ವಾಸ್ತವಿಕ ಅಂಶ ಗಮನಿಸಿದಾಗ ಗೃಹ ಇಲಾಖೆಯ ದತ್ತಾಂಶದ ಪ್ರಕಾರ ಉತ್ತರ ಪ್ರದೇಶ ಮಾನವ ಹಕ್ಕು ಉಲ್ಲಂಘನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಮನುಷ್ಯರ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಜನರ ಆಹಾರದ ಹಕ್ಕನ್ನು ಕಸಿಯುವ ಯತ್ನ ಕೂಡ ನಡೆಯುತ್ತಿದ್ದು, ಕೇವಲ ಮೂರು ಶೇಕಡಾ ಜನ ಶೇ.97 ಜನರ ಮೇಲೆ ತಮ್ಮ ಆಹಾರವನ್ನು ಹೇರಲು ಪ್ರಯತ್ನಿುತ್ತಿರುವುದು ಖಂಡನೀಯ ಎಂದರು.
ಸಾಮಾಜಿಕ ಕಾರ್ಯಕರ್ತ ಇದ್ರಿಸ್ ಹೂಡೆ ಮಾತನಾಡಿ, ಮಾನವ ಹಕ್ಕುಗಳ ಚಾರ್ಟರನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಅಂಗೀಕರಿಸಿದೆ. ಭಾರತ ಕೂಡ ತನ್ನ ಸಂವಿಧಾನದಲ್ಲಿ ಅದನ್ನು ಅಳವಡಿಸಿಕೊಂಡಿದೆ. ಅದನ್ನು ಕಡ್ಡಾುವಾಗಿ ನಾವು ಪಾಲಿಸಬೇಕಿದೆ ಎಂದರು.
ಮನುಷ್ಯರ ಬದುಕುವ ಹಕ್ಕು ಪ್ರಮುಖವಾದುದು. ರೈತ ಚಳುವಳಿಯಲ್ಲಿ ನೂರಾರು ರೈತರು ಸರಕಾರದ ರೈತ ವಿರೋಧಿ ಕಾನೂನಿನ ವಿರುದ್ಧ ಹೋರಾಡುತ್ತ ಮಡಿದರು. ರೈತರ ಹೋರಾಟಕ್ಕೆ ಸರಕಾರ ಮಣಿದು ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆದಿದೆ. ಈ ಮುಂಚೆ ಕೃಷಿ ತಿದ್ದುಪಡಿ ಕಾಯ್ದೆ ತಂದಾಗ ಅದನ್ನು ಐತಿಹಾಸಿಕ ಎಂದು ಕರೆಯಲಾಯಿತು. ಇದೀಗ ಹಿಂಪಡೆದದನ್ನು ಐತಿಹಾಸಿಕ ಎನ್ನಲಾಗುತ್ತಿದೆ. ಸರಕಾರಕ್ಕೆ ಗೊಂದಲ ಯಾಕೆ? ನಿಜವಾದ ಐತಿಹಾಸಿಕತೆ ಸುದೀರ್ಘ ರೈತ ಹೋರಾಟವಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಮತ್ತು ದಲಿತ ದಮನಿತ ಹೋರಾಟ ಸಮಿತಿಯ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಮಾತನಾಡಿ, ದಲಿತರ ಮೇಲೂ ಇವತ್ತು ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಕೇವಲ ಮೀಸೆಯಿಟ್ಟ ಕಾರಣಕ್ಕೆ ಹಲ್ಲೆ ಮಾಡಿದ ಘಟನೆಗಳು ದೇಶದಲ್ಲಿ ನಡೆದಿದೆ. ಇವತ್ತು ನಾವು ತಿನ್ನುವ ಆಹಾರವನ್ನು ಕೂಡ ಅವರ ಬಳಿ ಕೇಳಿ ತಿನ್ನಬೇಕಾದ ರೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಂಝಾನ್ ಕಾಪು ಇತ್ತೀಚೆಗೆ ಅಕ್ರಮ ಕಸಾಯಿಖಾನೆಯ ಹೆಸರಿನಲ್ಲಿ ಕಾಪುವಿನಲ್ಲಿ ನಡೆದ ದೌರ್ಜನ್ಯದ ಕುರಿತು ವಿವರಿಸಿದರು.
ಸಭೆಯಲ್ಲಿ ಸಾಲಿಡಾರಿಟಿಯ ಜಿಲ್ಲಾ ಸಂಚಾಲಕ ಯಾಸೀನ್ ಕೋಡಿಬೆಂಗ್ರೆ, ಜಿಲ್ಲಾ ಕಾರ್ಯದರ್ಶಿ ಝಕ್ರಿಯಾ, ಇಫ್ತಿಕಾರ್ ಉಡುಪಿ, ಅಬ್ದುಲ್ ಕಾದೀರ್ ಮೊಯ್ದಿನ್, ಎಪಿಸಿಆರ್ ಉಡುಪಿ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ, ಎಸ್‌ಐಒನ ಆಯಾನ್ ಮಲ್ಪೆ, ವಸೀಮ್ ಗುಜ್ಜರ್ ಬೆಟ್ಟು, ನಿಸಾರ್ ಉಡುಪಿ, ಝಕಿ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.










