ಸೇನೆಯಿಂದ ನಾಗರಿಕರ ಹತ್ಯೆ ಘಟನೆ ವಿರುದ್ಧ ನಾಗಾಲ್ಯಾಂಡ್ ನ ವಿವಿಧೆಡೆ ಪ್ರತಿಭಟನೆ
ಗೃಹ ಸಚಿವರಿಂದ ಕ್ಷಮೆಯಾಚನೆಗೆ ಆಗ್ರಹ

ಕೊಹಿಮಾ,ಡಿ. 12: ನಾಗಾಲ್ಯಾಂಡ್ ನಲ್ಲಿ ಕಳೆದ ವಾರ ಅಮಾಯಕ ನಾಗರಿಕರನ್ನು ಸೇನೆಯು ಗುಂಡಿಕ್ಕಿ ಹತ್ಯೆಗೈದ ಘಟನೆಯನ್ನು ಖಂಡಿಸಿ ಶನಿವಾರ ಮೋನ್ ಜಿಲ್ಲೆಯ ವಿವಿಧೆಡೆ ಬೃಹತ್ ಪ್ರತಿಭಟನಾ ರ್ಯಾಲಿಗಳು ನಡೆದವು. ನಾಗರಿಕರ ಹತ್ಯೆಯ ಕುರಿತಾಗಿ ಸಂಸತ್ ನಲ್ಲಿ ನೀಡಿದ ಸುಳ್ಳು ಹಾಗೂ ಕಪೋಲಕಲ್ಪಿತ ಹೇಳಿಕೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ರ‍್ಯಾಲಿಯಲ್ಲಿ ಪ್ರತಿಭಟನಕಾರರು ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಿದರು. ನಾಗಾಲ್ಯಾಂಡ್ ನಲ್ಲಿ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯ ಹೇರಿಕೆಯನ್ನು ಮುಂದುವರಿಸಿರುವುದರ ವಿರುದ್ಧವೂ ಅವರು ಪ್ರತಿಭಟನೆ ನಡೆಸಿದರು. ಅಮಾಯಕ ನಾಗರಿಕರನ್ನು ಹತ್ಯೆಗೈದ ತಪ್ಪಿತಸ್ಥ ಸೈನಿಕರನ್ನು ರಕ್ಷಿಸಲು ಅಫ್ಸ್ಪಾ ಕಾಯ್ದೆಯನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದವರು ಆಪಾದಿಸಿದರು.
ನಾಗರಿಕರ ಹತ್ಯೆ ನಡೆದ ನಾಗಾಲ್ಯಾಂಡ್ ನ ಒಟಿಂಗ್ ಗ್ರಾಮದ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು. ಸೇನೆಯ ಗುಂಡಿಗೆ ಬಲಿಯಾದ 14 ಮಂದಿಯಲ್ಲಿ 12 ಮಂದಿ ಒಟಿಂಗ್ ಗ್ರಾಮದ ನಿವಾಸಿಗಳಾಗಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಕೊನ್ಯಾಕ್ ಬುಡಕಟ್ಟು ಸಂಘಟನೆಗಳ ಸರ್ವೋಚ್ಚ ಘಟಕವಾದ ಕೊನ್ಯಾಕ್ ಯೂನಿಯನ್ ವಹಿಸಿತ್ತು.
‘‘ನಾವು ನ್ಯಾಯ ಕೇಳುತ್ತಿದ್ದೇವೆ. ನಮಗೆ ಅನುಕಂಪದ ಅಗತ್ಯವಿಲ್ಲ. ಸತ್ಯವನ್ನು ತಿರುಚುವುದು ದುರದೃಷ್ಟಕರವಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಸೇನೆಯಿಂದ ನಾಗರಿಕರ ಹತ್ಯೆ ಘಟನೆ ಬಗ್ಗೆ ಸಂಸತ್ ನಲ್ಲಿ ತಪ್ಪು ಹೇಳಿಕೆಗಳನ್ನು ನೀಡುವ ಮೂಲಕ ಜಗತ್ತನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಅವರು ತಕ್ಷಣವೇ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು. ಅವರು ಕ್ಷಮೆಯಾಚಿಸಬೇಕೆಂದು ನಾವು ಆಗ್ರಹಿಸುತ್ತೇವೆ’’ ಎಂದು ಒಕ್ಕೂಟದ ಉಪಾಧ್ಯಕ್ಷರಾದ ಹೊನಾಂಗ್ ಕೊನ್ಯಾಕ್ ತಿಳಿಸಿದ್ದಾರೆ.
ಸೇನೆಯ ಗುಂಡಿಗೆ ಬಲಿಯಾದ 14 ಕೊನ್ಯಾಕ್ಯುವಕರಿಗೆ ನ್ಯಾಯ ದೊರೆಯುವರೆಗೆ ನಾವು ವಿರಮಿಸಲಾರೆವು ಎಂದು ಆತ ತಿಳಿಸಿದ್ದಾರೆ. ಈಗಾಗಲೇ ತಾವು ಕೇಂದ್ರದ ಮುಂದೆ ಇಟ್ಟಿರುವ ಬೇಡಿಕೆಯ ಜೊತೆಗೆ ಈ ಬೇಡಿಕೆಯನ್ನು ಕೂಡಾ ಸೇರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಮಾಯಕ ಯುವಕರನ್ನು ಹತ್ಯೆಗೈದ ಸೈನಿಕರು, ‘‘ ವೃತ್ತಿಪರರಲ್ಲ ಹಾಗೂ ಅರೆಬರೆ ತರಬೇತಿಯನ್ನು ಪಡೆದವರು ಮತ್ತು ವಿಕೃತಮನಸ್ಸಿನವರು’’ ಎಂದು ಕೊನ್ಯಾಕ್ ಯೂನಿಯನ್ ಇಂದು ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಕಟುವಾಗಿ ತಿಳಿಸಿದೆ.
ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯಾಕಾಂಡಕ್ಕಾಗಿ ಸೇನೆಯು ತೀವ್ರ ವಿಷಾದ ವ್ಯಕ್ತಪಡಿಸಿದೆ ಹಾಗೂ ಈ ಘಟನೆಯನ್ನು ಮುಚ್ಚಿಹಾಕುವ ಯಾವುದೇ ಪ್ರಯತ್ನ ನಡೆದಿಲ್ಲವೆಂದು ಅದು ಸ್ಪಷ್ಟವಾಗಿ ತಿಳಿಸಿದೆ. ಮಹಜರಿಗಾಗಿ ಮಾತ್ರವೇ ಹತ್ಯೆಯಾದವರ ಶವಗಳನ್ನು ಪೊಲೀಸ್ ಠಾಣೆಗೆ ಒಯ್ಯಲಾಗಿತ್ತೆಂದು ಅದು ತಿಳಿಸಿದೆ.
ನಾಗಾಲ್ಯಾಂಡ್ನ ಡಿಸೆಂಬರ್ 6ರಂದು ಮೋನ್ ಜಿಲ್ಲೆಯ ಒಟಿಂಗ್ ಗ್ರಾಮದಲ್ಲಿ ಭಯೋತ್ಪಾದಕರೆಂದು ಶಂಕಿಸಿ ಸೈನಿಕರು 6 ಮಂದಿ ನಾಗರಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಘಟನೆಯ ಬಳಿಕ ಉದ್ರಿಕ್ತ ಗ್ರಾಮಸ್ಥರು ಸೇನಾನೆಲೆಗೆ ದಾಳಿ ನಡೆಸಲು ಯತ್ನಿಸಿದಾಗ ಇನ್ನೂ 7 ಮಂದಿ ನಾಗರಿಕರು ಸೇನೆಯಗುಂಡಿಗೆ ಬಲಿಯಾಗಿದ್ದರು. ಹಿಂಸಾಚಾರದಲ್ಲಿ ಓರ್ವ ಸೈನಿಕ ಕೂಡಾ ಸಾವನ್ನಪ್ಪಿದ್ದರು.







