ಬ್ರೆಝಿಲ್: ನೈಟ್ ಕ್ಲಬ್ ಬೆಂಕಿ ದುರಂತ ಪ್ರಕರಣ: 4 ಮಂದಿಗೆ ಕಠಿಣ ಜೈಲುಶಿಕ್ಷೆ

ಸಾಂದರ್ಭಿಕ ಚಿತ್ರ
ಬ್ರೆಝಿಲ್, ಡಿ.11: 242 ಮಂದಿ ಮೃತಪಟ್ಟಿದ್ದ ನೈಟ್ಕ್ಲಬ್ ಬೆಂಕಿ ದುರಂತ ಪ್ರಕರಣದಲ್ಲಿ 4 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿರುವ ಬ್ರೆಝಿಲ್ ನ್ಯಾಯಾಲಯ, ಅವರಿಗೆ 22 ವರ್ಷದರೆಗಿನ ಜೈಲುಶಿಕ್ಷೆ ವಿಧಿಸಿದೆ.
‘ದಕ್ಷಿಣದ ನಗರ ಸಾಂತಾಮರಿಯಾದ ದಿ ಕಿಸ್’ ನೈಟ್ ಕ್ಲಬ್ ನಲ್ಲಿ 2013ರ ಜನವರಿ 28ರಂದು ಸಂಗೀತಗೋಷ್ಟಿಯ ತಂಡದವರು ಬೆಳಗಿದ ಜ್ವಾಲೆಯು ಕ್ಲಬ್ ನ ಸೀಲಿಂಗ್ ಗೆ ಹಬ್ಬಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಂಗೀತಗೋಷ್ಟಿ ನಡೆಸುತ್ತಿದ್ದ ‘ದಿ ಗುರಿಝಡ ಫಾಂಡಂಗ್ವೆರ’ ತಂಡದ ಇಬ್ಬರು ಸದಸ್ಯರು ಹಾಗೂ ಕ್ಲಬ್ ನ ಇಬ್ಬರು ಮಾಲಕರನ್ನು ಅಪರಾಧಿಗಳೆಂದು ತೀರ್ಮಾನಿಸಿದೆ. ಇವರ ವಿರುದ್ಧದ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು. ದುರಂತದಲ್ಲಿ ಮೃತರಾದವರಲ್ಲಿ ಹೆಚ್ಚಿನವರು ವಿವಿ ವಿದ್ಯಾರ್ಥಿಗಳು. ಕ್ಲಬ್ ನ ಮಾಲಕರಾದ ಎಲಿಸಾಂಡ್ರೋ ಕ್ಯಾಲೆಗರೋ ಮತ್ತು ಮೌರೊ ಲೊಂಡರೊಗೆ ಕ್ರಮವಾಗಿ 22.5 ಮತ್ತು 19.5 ವರ್ಷ ಜೈಲುಶಿಕ್ಷೆ, ಸಂಗೀತ ತಂಡದ ಲೂಸಿಯಾನೊ ಬೊನಿಲ್ಹಾ, ಮತ್ತು ಮಾರ್ಸೆಲೊ ಡಿ ಜಿಸಸ್ ಸಾಂಟೋಸ್ ಗೆ ತಲಾ 18 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ.





