ಕೇವಲ 2 ಗಂಟೆಯಲ್ಲಿ ಒಮೈಕ್ರಾನ್ ಪತ್ತೆ ಹಚ್ಚುವ ಟೆಸ್ಟಿಂಗ್ ಕಿಟ್ ತಯಾರಿಸಿದ ಐಸಿಎಂಆರ್

ದಿಬ್ರುಗಢ್ (ಅಸ್ಸಾಂ): ದೇಶದಲ್ಲಿ ಕೊರೋನ ವೈರಸ್ ನ ಹೊಸ ತಳಿ ಒಮೈಕ್ರಾನ್ ಬಗ್ಗೆ ಪ್ರತಿದಿನ ಹೊಸ ವಿವರಗಳು ಹಾಗೂ ಕಳವಳಗಳು ಹೊರಹೊಮ್ಮುತ್ತಿರುವ ಸಮಯದಲ್ಲಿ ಅಸ್ಸಾಂನ ದಿಬ್ರುಗಢ್‌ನಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (ಆರ್‌ಎಂಆರ್‌ಸಿ) ಕೇವಲ ಎರಡು ಗಂಟೆಗಳಲ್ಲಿ ಹೊಸ ಕೋವಿಡ್ ರೂಪಾಂತರ ಒಮೈಕ್ರಾನ್ ಅನ್ನು ಪತ್ತೆ ಹಚ್ಚುವ ಟೆಸ್ಟಿಂಗ್ ಕಿಟ್ ಅನ್ನು ಕಂಡುಹಿಡಿದಿದೆ ಎಂದು NDTV ವರದಿ ಮಾಡಿದೆ.
ಸಂಗ್ರಹಿಸಿದ ಮಾದರಿಯಲ್ಲಿ ಓಮೈಕ್ರಾನ್ ವೈರಾಣು ತಳಿ ಇರುವಿಕೆಯನ್ನು ಈ ಕಿಟ್ ಮೂಲಕ 2 ಗಂಟೆಗಳಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆ. ವಿಜ್ಞಾನಿ ಡಾ.ಬಿಸ್ವಜ್ಯೋತಿ ಅವರ ನೇತೃತ್ವದಲ್ಲಿ ಕಿಟ್ ಅಭಿವೃದ್ದಿಪಡಿಸಲಾಗಿದೆ ಎಂದು ವರದಿಯಾಗಿದೆ.
ಹೊಸ ರೂಪಾಂತರದ ಕೊರೋನ ಹರಡುವಿಕೆಯನ್ನು ಪರಿಶೀಲಿಸಲು ಹೊಸ ನಿರ್ಬಂಧಗಳನ್ನು ತಂದ ನಂತರ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಾ ವರದಿಗಳಿಗಾಗಿ ಕಾಯುವ ಸಮಯ ಹೆಚ್ಚಾಗಿರುವುದರಿಂದ ಪರದಾಡುತ್ತಿರುವ ಪ್ರಯಾಣಿಕರಿಗೆ ಇದು ನಿಟ್ಟಿಸಿರುಬಿಡುವಂತೆ ಮಾಡಿದೆ.
ಐಸಿಎಂಆರ್ ದಿಬ್ರುಗಢ ತಂಡವು ನವೆಂಬರ್ 24 ರಿಂದ ಈ ಕಿಟ್ ಅಭಿವೃದ್ದಿಪಡಿಸಲು ಕೆಲಸ ಮಾಡುತ್ತಿದೆ.
ಪ್ರಸ್ತುತ, ಈ ಪರೀಕ್ಷಾ ಕಿಟ್‌ನ ಪರವಾನಿಗಿ ಪ್ರಕ್ರಿಯೆಯು ನಡೆಯುತ್ತಿದೆ ಹಾಗು ಮುಂದಿನ ವಾರದಿಂದ ಲ್ಯಾಬ್‌ಗೆ ಲಭ್ಯವಾಗುವ ನಿರೀಕ್ಷೆಯಿದೆ.