ನಾನು ಹಿಂದೂ, ಹಿಂದುತ್ವವಾದಿಯಲ್ಲ: ಜೈಪುರ ರ್ಯಾಲಿಯಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಜೈಪುರ (ರಾಜಸ್ಥಾನ),ಡಿ.12: ಭಾರತವು ಹಿಂದುಗಳ ದೇಶವಾಗಿದೆಯೇ ಹೊರತು ಹೇಗಾದರೂ ಅಧಿಕಾರದಲ್ಲಿರಲು ಹವಣಿಸುತ್ತಿರುವ ಹಿಂದುತ್ವವಾದಿಗಳದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರವಿವಾರ ಇಲ್ಲಿ ಹೇಳಿದರು.
ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ರಾಹುಲ್,ಇಂದು ದೇಶದಲ್ಲಿ ಬೆಲೆಯೇರಿಕೆ ಮತ್ತು ಸಂಕಷ್ಟಗಳಿದ್ದರೆ ಅದಕ್ಕೆ ಹಿಂದುತ್ವವಾದಿಗಳೇ ಕಾರಣರಾಗಿದ್ದಾರೆ. ಯಾವುದೇ ಸ್ಥಿತಿಯಲ್ಲಿಯೂ ಅಧಿಕಾರದಲ್ಲಿರಲು ಹಿಂದುತ್ವವಾದಿಗಳು ಬಯಸುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ರಾಹುಲ್,ಏಳು ವರ್ಷಗಳಲ್ಲಿ ಅವರು ಮತ್ತು ಅವರ ಮೂರ್ನಾಲ್ಕು ಕೈಗಾರಿಕೋದ್ಯಮಿ ಸ್ನೇಹಿತರು ಸೇರಿಕೊಂಡು ದೇಶವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು. ಹಿಂದು ಮತ್ತು ಹಿಂದುತ್ವ ಇವೆರಡೂ ವಿಭಿನ್ನ ಶಬ್ದಗಳಾಗಿವೆ ಎಂದು ಹೇಳಿದ ಅವರು,ಒಂದು ಆತ್ಮದಲ್ಲಿ ಎರಡು ಜೀವಗಳು ಇರಲು ಸಾಧ್ಯವಿಲ್ಲ,ಅದೇ ರೀತಿ ಎರಡು ಶಬ್ದಗಳು ಒಂದೇ ಅರ್ಥವನ್ನು ನೀಡುವುದಿಲ್ಲ. ಯಾರಿಗೂ ಹೆದರದ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುವ ವ್ಯಕ್ತಿ ಹಿಂದು ಆಗಿದ್ದಾನೆ.
ಮಹಾತ್ಮಾ ಗಾಂಧಿಯವರು ಹಿಂದುವಾಗಿದ್ದರು ಮತ್ತು ಗೋಡ್ಸೆ ಹಿಂದುತ್ವವಾದಿಯಾಗಿದ್ದ. ಓರ್ವ ಹಿಂದು ಮಹಾತ್ಮಾ ಗಾಂಧಿಯವರಂತೆ ತನ್ನ ಜೀವಮಾನದುದ್ದಕ್ಕೂ ಸತ್ಯಕ್ಕಾಗಿ ನಿರಂತರವಾಗಿ ಶೋಧಿಸುತ್ತಿರುತ್ತಾನೆ. ಆದರೆ ಅಂತ್ಯದಲ್ಲಿ ಹಿಂದುತ್ವವಾದಿ ಗಾಂಧಿಯವರ ಎದೆಯಲ್ಲಿ ಮೂರು ಗುಂಡುಗಳನ್ನು ನುಗ್ಗಿಸಿದ್ದ ಎಂದರು.
‘ಹಿಂದುತ್ವವಾದಿ ಯಾರನ್ನಾದರೂ ಥಳಿಸಬೇಕಿದ್ದರೆ ಅಥವಾ ಕೊಲ್ಲಬೇಕಿದ್ದರೂ ಸರಿ,ತನ್ನ ಇಡೀ ಬದುಕನ್ನು ಅಧಿಕಾರಕ್ಕಾಗಿ ವ್ಯಯಿಸುತ್ತಾನೆ. ಇದು ‘ಸತ್ತಾಗ್ರಹ’ವಾಗಿದೆಯೇ ಹೊರತು ಸತ್ಯಾಗ್ರಹವಲ್ಲ. ನಾನೋರ್ವ ಹಿಂದು,ಹಿಂದುತ್ವವಾದಿಯಲ್ಲ’ ಎಂದು ಹೇಳಿದ ಅವರು,ಹಿಂದುತ್ವವಾದಿಗಳನ್ನು ಮತ್ತೊಮ್ಮೆ ಹೊರದಬ್ಬಬೇಕು ಮತ್ತು ದೇಶದಲ್ಲಿ ಹಿಂದುಗಳ ಆಡಳಿತವನ್ನು ತರಬೇಕು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕಳೆದ 70 ವರ್ಷಗಳಲ್ಲಿ ತನ್ನ ಪಕ್ಷವು ನಿರ್ಮಿಸಿದ್ದನ್ನೆಲ್ಲವನ್ನೂ ಮೋದಿ ನೇತೃತ್ವದ ಕೇಂದ್ರ ಸರಕಾರವು ತನ್ನ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.