ಉರ್ವ: ಪೊಂಪೈ ಮಾತೆಯ ವಾರ್ಷಿಕ ಮಹಾ ಹಬ್ಬ
ಮಂಗಳೂರು: ನಗರದ ಲೇಡಿಹಿಲ್-ಉರ್ವದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹಾ ಹಬ್ಬ ರವಿವಾರ ಜರಗಿತು. ಮೇರಿ ಮಾತೆ ಮನಸ್ಸು ಹಾಗೂ ಸ್ವಚ್ಛ ಹೃದಯದ ಮೂಲಕ ದೇವರನ್ನು ಪ್ರೀತಿಸಲು ಕಲಿಸುತ್ತಾರೆ ಎನ್ನುವ ವಾರ್ಷಿಕೋತ್ಸವದ ಧ್ಯೇಯ ವಾಕ್ಯವಾದೊಂದಿಗೆ ಹಬ್ಬದ ವಿಶೇಷ ಪೂಜೆಗಳು ನಡೆಯಿತು.
ಹಬ್ಬದ ಅಂಗವಾಗಿ ಬೆಳಗ್ಗೆ ಇಂಗ್ಲಿಷ್ನಲ್ಲಿ ಬಲಿಪೂಜೆಗಳು ನಡೆಯಿತು. ಬಳಿಕ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಸಂಜೆ ಪುಣ್ಯಕ್ಷೇತ್ರದ ತೆರೆದ ಆವರಣದಲ್ಲಿ ಬಲಿಪೂಜೆಯನ್ನು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ನೇತೃತ್ವದಲ್ಲಿ ನಡೆಯಿತು.
ಪ್ರವಚನವನ್ನು ಬೇಳ ಶೋಕಮಾತಾ ಚರ್ಚ್ನ ಪ್ರಧಾನ ಧರ್ಮಗುರು ಫಾ. ಸ್ಟೇನಿ ಪಿರೇರಾ ನಡೆಸಿಕೊಟ್ಟರು. ಪುಣ್ಯ ಕ್ಷೇತ್ರದ ನಿರ್ದೇಶಕ ರೆ.ಫಾ. ಬೆಂಜಮೀನ್ ಪಿಂಟೋ ವಾರ್ಷಿಕ ಹಬ್ಬದ ತಯಾರಿಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಹಬ್ಬದ ವಿಶೇಷ ಪೂಜೆಯ ಬಳಿಕ ಪವಿತ್ರ ಸಂಸ್ಕಾರದ ಆಶೀರ್ವಚನ ಕಾರ್ಯಕ್ರಮ ನಡೆಯಿತು.ಸಂಜೆ ನಡೆದ ಬಲಿಪೂಜೆಯಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ 50ಕ್ಕೂ ಹೆಚ್ಚು ಧರ್ಮಗಳುಗಳು ಪಾಲ್ಗೊಂಡಿದ್ದರು.