‘ಇಂಡಿಯಾ- 75 ಬಿಆರ್ಒ ಮೋಟಾರ್ ಸೈಕಲ್ ಎಕ್ಸ್ಪೆಡಿಷನ್ 2021’ ರ್ಯಾಲಿಗೆ ಹಸಿರು ನಿಶಾನೆ
![‘ಇಂಡಿಯಾ- 75 ಬಿಆರ್ಒ ಮೋಟಾರ್ ಸೈಕಲ್ ಎಕ್ಸ್ಪೆಡಿಷನ್ 2021’ ರ್ಯಾಲಿಗೆ ಹಸಿರು ನಿಶಾನೆ ‘ಇಂಡಿಯಾ- 75 ಬಿಆರ್ಒ ಮೋಟಾರ್ ಸೈಕಲ್ ಎಕ್ಸ್ಪೆಡಿಷನ್ 2021’ ರ್ಯಾಲಿಗೆ ಹಸಿರು ನಿಶಾನೆ](https://www.varthabharati.in/sites/default/files/images/articles/2021/12/12/317383-1639321070.jpg)
ಮಂಗಳೂರು, ಡಿ.12: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಜನಜಾಗೃತಿಯೊಂದಿಗೆ ರಾಷ್ಟ್ರ ಪ್ರೇಮ ಉದ್ದೀಪನಗೊಳಿಸಲು ಭಾರತೀಯ ಭೂ ಸೇನೆಯ ಬಾರ್ಡರ್ ರೋಡ್ ಆರ್ಗನೈಜೇಶನ್ (ಬಿಆರ್ಒ) ಹಮ್ಮಿಕೊಂಡಿರುವ ‘ಇಂಡಿಯಾ- 75 ಬಿಆರ್ಒ ಮೋಟಾರ್ ಸೈಕಲ್ ಎಕ್ಸ್ಪೆಡಿಷನ್ 2021’ ಮೋಟರ್ ಬೈಕ್ ರ್ಯಾಲಿಯು ಶನಿವಾರ ಕೇರಳದಿಂದ ಮಂಗಳೂರಿಗೆ ಆಗಮಿಸಿದ್ದು, ಗೋವಾದತ್ತ ಸಾಗುವ ಮುಂದಿನ ಪ್ರಯಾಣಕ್ಕೆ ರವಿವಾರ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹಸಿರು ನಿಶಾನೆ ತೋರಿಸಿದರು.
ನಗರದ ಡೊಂಗರಕೇರಿಯ ಕೆನರಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್ ಪ್ರಾಣದ ಹಂಗು ತೊರೆದು ರಾತ್ರಿ-ಹಗಲೆನ್ನದೆ ದೇಶ ಸೇವೆ ಮಾಡುವ ಸೈನಿಕರ ಬಗ್ಗೆ ಮತ್ತು ದೇಶಾಭಿಮಾನ ಮೂಡಿಸುವ ವಿಷಯಗಳು ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ದೇಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ ದೇಶದ ವಿವಿಧ ಭಾಗಗಳಲ್ಲಿ ಬದುಕುತ್ತಿರುವ ಜನರ ಆಚಾರ ವಿಚಾರ, ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಬೇಕು. ಇಂತಹ ರ್ಯಾಲಿಗಳಿಂದ ಯುವಕರು ಸೈನ್ಯ ಸೇರಲು ಪ್ರೇರಣೆ ಸಿಗಲಿದೆ ಎಂದು ಸುನಿಲ್ ಕುಮಾರ್ ಹೇಳಿದರು. ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ, ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಬಿಆರ್ಒ ತಂಡದ ನಾಯಕ ಕರ್ನಲ್ ಪಿ.ಎಸ್.ರೆಡ್ಡಿ, ಮಾಜಿ ನಿಕರ ಸಂಘದ ಪದಾಧಿಕಾರಿ ಕರ್ನಲ್ ಎನ್. ಶರತ್ ಭಂಡಾರಿ, ಬ್ರಿಗೇಡಿಯರ್ ಐ.ಎನ್.ರೈ, ನಿವೃತ್ತ ಯೋಧ ಕ್ಯಾ. ರಮೇಶ್ ಕಾರ್ಣಿಕ್, ಬ್ರಿಗೇಡಿಯರ್ ಪೂರ್ವಿಮಾತ್ ಡಿ.ಎಂ., ಸಚಿನ್ ಕುಲಕರ್ಣಿ, ಮಿಥುನ್ ಚೌಟರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಎಂ.ಐರನ್ ಮತ್ತಿತರರು ಉಪಸ್ಥಿತರಿದ್ದರು.
20 ಸಾವಿರ ಕಿ.ಮೀ.ಕ್ರಮಿಸುವ ಗುರಿ
ಬಿಆರ್ಒ ಸಂಸ್ಥೆಯ ಈ ರ್ಯಾಲಿಯು 75 ದಿನಗಳಲ್ಲಿ 75 ಬೈಕ್ಗಳಲ್ಲಿ 6 ತಂಡಗಳಲ್ಲಿ 20 ಸಾವಿರ ಕಿ.ಮೀ. ಕ್ರಮಿಸುವ ಗುರಿ ಹೊಂದಿದೆ. ಇದರ 6ನೇ ತಂಡ ಡಿ.9ರಂದು ಕೇರಳದ ತಿರುವನಂತಪುರಂನಿಂದ ರ್ಯಾಲಿ ಆರಂಭಿಸಿದ್ದು, ಡಿ.11ರಂದು ಸಂಜೆ ತಲಪಾಡಿ ಮೂಲಕ ಕರ್ನಾಟಕ ಪ್ರವೇಶಿಸಿದೆ. ಒಟ್ಟು 26 ಮಂದಿ ರ್ಯಾಲಿಯಲ್ಲಿ ಆಗಮಿಸಿದ್ದಾರೆ. ರಾಜ್ಯದಲ್ಲಿ ಹಾದು ಹೋಗುತ್ತಿರುವ ಏಕೈಕ ತಂಡ ಇದಾಗಿದ್ದು, ದ.ಕ., ಉಡುಪಿ ಮತ್ತು ಉತ್ತರ ಕರ್ನಾಟಕದ ಮೂಲಕ ಗೋವಾ ಪ್ರವೇಶಿಸಲಿದೆ.