‘ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ’: ಜ.ರಾವತ್ ಅವರ ಅಂತಿಮ ವೀಡಿಯೊ ಸಂದೇಶ

ಹೊಸದಿಲ್ಲಿ,ಡಿ.12: ‘ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಬನ್ನಿ,ಎಲ್ಲರೂ ಒಗ್ಗೂಡಿ ವಿಜಯಪರ್ವವನ್ನು ಆಚರಿಸೋಣ’ ಇದು ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೆ ಒಂದು ದಿನ ಮೊದಲು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ನೀಡಿದ್ದ ಕೊನೆಯ ಸಾರ್ವಜನಿಕ ಸಂದೇಶವಾಗಿತ್ತು.
ಭಾರತೀಯ ಸೇನೆಯು ರವಿವಾರ ಬಿಡುಗಡೆಗೊಳಿಸಿರುವ 1.09 ನಿಮಿಷಗಳ ವೀಡಿಯೊ ಕ್ಲಿಪ್‌ನಲ್ಲಿ 1971ರ ಯುದ್ಧದ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಜ.ರಾವತ್ ಸಶಸ್ತ್ರ ಪಡೆಗಳ ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ ಮತ್ತು ಹುತಾತ್ಮ ಯೋಧರಿಗೆ ಗೌರವಗಳನ್ನು ಸಲ್ಲಿಸಿದ್ದಾರೆ.
ಡಿ.7ರಂದು ಈ ವೀಡಿಯೊವನ್ನು ಮುದ್ರಿಸಿಕೊಳ್ಳಲಾಗಿತ್ತು ಎಂದು ಸೇನೆಯು ತಿಳಿಸಿದೆ.
ಪಾಕಿಸ್ತಾನದ ಜೊತೆ 1971ರ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ವೀಡಿಯೊದಲ್ಲಿ ನಮನಗಳನ್ನು ಸಲ್ಲಿಸಿರುವ ಜ.ರಾವತ್ ವಿಜಯದ 50ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವಂತೆ ದೇಶದ ಪ್ರಜೆಗಳನ್ನು ಕೋರಿಕೊಂಡಿದ್ದಾರೆ.
ರವಿವಾರ ಇಲ್ಲಿಯ ಇಂಡಿಯಾ ಗೇಟ್ ಸಂಕೀರ್ಣದಲ್ಲಿ ನಡೆದ ‘ವಿಜಯ ಪರ್ವ ’ನ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಈ ವೀಡಿಯೊವನ್ನು ತೋರಿಸಲಾಗಿತ್ತು. ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಸಶಸ್ತ್ರ ಪಡೆಗಳ ಉನ್ನತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯ ಪರ್ವದ ಅಂಗವಾಗಿ ಸರಕಾರವು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
‘ಈ ಸಂದರ್ಭದಲ್ಲಿ ನಮ್ಮ ಧೀರ ಯೋಧರ ತ್ಯಾಗಗಳನ್ನು ಸ್ಮರಿಸಿ ನಾನು ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಇಂಡಿಯಾ ಗೇಟ್‌ನಲ್ಲಿ ಡಿ.12 ಮತ್ತು 14ರ ನಡುವೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಮ್ಮ ಧೀರ ಯೋಧರ ಸ್ಮರಣಾರ್ಥ ನಿರ್ಮಿಸಲಾಗಿರುವ ಅಮರ ಜವಾನ ಜ್ಯೋತಿ ಸಂಕೀರ್ಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅತೀವ ಹೆಮ್ಮೆಯ ವಿಷಯವಾಗಿದೆ ’ ಎಂದು ಜ.ರಾವತ್ ಸಂದೇಶದಲ್ಲಿ ಹೇಳಿದ್ದಾರೆ.
Last video statement of CDS General Bipin Rawat on the occasion of Vijay Parv that was recorded in the evening of 07 December 2021 hours before the unfortunate deadly crash in Tamil Nadu. This message was played at the inauguration of Vijay Parv Event at India Gate today. pic.twitter.com/s9AERwXqLA
— Aditya Raj Kaul (@AdityaRajKaul) December 12, 2021