ಅಮೆರಿಕ: ಸುಂಟರಗಾಳಿಗೆ ಕನಿಷ್ಟ 100 ಮಂದಿ ಮೃತಪಟ್ಟಿರುವ ಶಂಕೆ
photo:PTI
ವಾಷಿಂಗ್ಟನ್, ಡಿ.12: ಮಧ್ಯಪಶ್ಚಿಮ ಅಮೆರಿಕದಲ್ಲಿ ಭೀಕರ ಸರಣಿ ಸುಂಟರಗಾಳಿಯಿಂದ ಕನಿಷ್ಟ 100 ಮಂದಿ ಮೃತಪಟ್ಟಿದ್ದು ಹಲವು ಮನೆಗಳು, ಅಂಗಡಿ, ಉದ್ದಿಮೆಗಳಿಗೆ ವ್ಯಾಪಕ ಹಾನಿಯಾಗಿದ್ದು ಬಾಧಿತ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಸುಂಟರಗಾಳಿ ಇದಾಗಿದೆ. ಇದೊಂದು ದುರಂತ ಮತ್ತು ಎಷ್ಟು ಜೀವಹಾನಿಯಾಗಿದೆ ಮತ್ತು ಹಾನಿಯ ಪ್ರಮಾಣದದ ಬಗ್ಗೆ ನಮಗೆ ಇನ್ನೂ ಖಚಿತವಾಗಿಲ್ಲ ಎಂದು ಹೇಳಿದ್ದು , ಅತ್ಯಧಿಕ ಹಾನಿಗೀಡಾದ ಕೆಂಟುಕಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ ಅನುಮೋದನೆ ನೀಡಿದ್ದಾರೆ. ಕೆಂಟುಕಿಯಲ್ಲಿ ಕನಿಷ್ಟ 22 ಮಂದಿ ಮೃತರಾಗಿದ್ದಾರೆ. ಚಳಿಗಾಲದಲ್ಲಿ ಅಪರೂಪವಾಗಿರುವ ಸುಂಟರಗಾಳಿಯಿಂದ ಕೆಂಟುಕಿಯಲ್ಲಿನ ಮೋಂಬತ್ತಿ ಫ್ಯಾಕ್ಟರಿ ಧ್ವಂಸವಾಗಿದ್ದು ಅಕ್ಕಪಕ್ಕದ ನಗರಗಳಲ್ಲಿ ಹಲವು ಮನೆ, ಆಸ್ಪತ್ರೆಗಳಿಗೆ ಹಾನಿಯಾಗಿದೆ. ಇಲಿನಾಯಿಸ್ನಲ್ಲಿನ ಅಮಝಾನ್ ಗೋದಾಮಿನಲ್ಲಿದ್ದ ಕನಿಷ್ಟ 6 ಕಾರ್ಮಿಕರು ಮೃತರಾಗಿದ್ದಾರೆ.
ಸುಂಟರಗಾಳಿಯಿಂದ ಧ್ವಂಸಗೊಂಡ ಕೆಂಟುಕಿಯ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಸುಮಾರು 110 ಮಂದಿ ಕಾರ್ಮಿಕರಿದ್ದು 40 ಕಾರ್ಮಿಕರನ್ನು ಕಟ್ಟಡದ ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಇನ್ನೂ ಹಲವರು ಅಡಿಯಲ್ಲಿ ಸಿಕ್ಕಿಬಿದ್ದಿರುವ ಸಾಧ್ಯತೆಯಿದ್ದು , ಜೀವಂತವಾಗಿ ಹೊರಬರಬೇಕಿದ್ದರೆ ಪವಾಡ ಸಂಭವಿಸಬೇಕು ಎಂದು ಕೆಂಟುಕಿ ಪ್ರಾಂತದ ಗವರ್ನರ್ ಆ್ಯಂಡಿ ಬೆಶಿಯರ್ ಹೇಳಿದ್ದಾರೆ.