ಖಾನಪುರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ಬೆಳಗಾವಿ ಸುವರ್ಣಸೌಧ, ಡಿ.13: ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಯಿತು.
ಸೋಮವಾರ ಖಾನಾಪುರದಿಂದ ಬೆಳಗಾವಿಯ ಸುವರ್ಣಸೌಧದವರೆಗೂ ನಡೆದ ಪಾದಯಾತ್ರೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಖಾನಾಪುರ ಕ್ಷೇತ್ರದ ಅಭಿವೃದ್ಧಿ, ನೆರೆ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರಕಾರದ ಗಮನ ಸೆಳೆಯಲು 'ಸಂಘರ್ಷ ಪಾದಯಾತ್ರೆ' ಹಮ್ಮಿಕೊಳ್ಳಲಾಗಿದೆ ಎಂದು ಧರಣಿ ನಿರತರು ತಿಳಿಸಿದರು.
ಪಾದ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ನಿದ್ದೆ ಮಾಡುತ್ತಿರುವ ಸರಕಾರವಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಪ್ರವಾಹ, ಅತಿವೃಷ್ಟಿ ಮತ್ತು ಬರ ರಾಜ್ಯದ ಜನರನ್ನು ಕಾಡುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಸರಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ. 2019ರಲ್ಲಿ ಬಿದ್ದ ಮನೆಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ನಾವು ಜಾರಿ ಮಾಡಿದ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಅಕ್ಕಿ ಕೊಡುವುದು, ಶಾದಿ ಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇದು ಲಜ್ಜೆಗೆಟ್ಟ ಸರಕಾರ ಎಂದು ಟೀಕಿಸಿದರು.
ಪೊಲೀಸರ ತಡೆ
‘ಸಂಘರ್ಷ ಪಾದಯಾತ್ರೆ'ಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಸುವರ್ಣಸೌಧದವರೆಗೂ ಪಾದಯಾತ್ರೆ ನಡೆಸಲು ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಅರ್ಧಕ್ಕೆ ತಡೆದ ದೃಶ್ಯ ಕಂಡಿತು. ಸುವರ್ಣಸೌಧ ಸುತ್ತ ನಿಷೇಧಾಜ್ಞೆ ಜಾರಿ ಇರುವುದರಿಂದ ಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಮಾಜಾಯಿಷಿ ನೀಡಿದರು. ಪೊಲೀಸರ ವರ್ತನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.








