ನೂತನ ಕಾಶ್ಮೀರಿ ಸಂಗೀತದ ತಾರೆ ಅಲಿ ಸೈಫುದ್ದೀನ್

2016ರ ಬೇಸಿಗೆಯಲ್ಲಿ ಅಲಿ ಸೈಫುದ್ದೀನ್ ಹಾಡೊಂದನ್ನು ಬರೆಯಲು ಆರಂಭಿಸಿದರು. ಆ ಹಾಡಿನ ಮೊದಲ ಸಾಲುಗಳ ಅರ್ಥ ಹೀಗಿದೆ:
‘‘ನಮ್ಮ ಸಂತರು ಯಾವತ್ತೂ ಖುಷಿಯಾಗಿರಲಿ/ ಈ ಜಲಪಾತಗಳು, ಹಸಿರು ಹುಲ್ಲುಗಾವಲುಗಳು ಮತ್ತು ತಣ್ಣನೆ ಹಿಮ ಕೊನೆಯವರೆಗೂ ಇರಲಿ’’
ಅವರು ಕೋರಿಕೆಯ, ಬಯಕೆಯ ಹಾಗೂ ಅತ್ಯಂತ ಮುಖ್ಯವಾಗಿ ಭರವಸೆ ಹುಟ್ಟಿಸುವ ಹಾಡೊಂದನ್ನು ಬರೆಯಲು ಹೊರಟಿದ್ದರು. ಅದೇ ವೇಳೆಗೆ, ಜುಲೈಯಲ್ಲಿ ಬುರ್ಹಾನ್ ವಾನಿ ಹತ್ಯೆಗೊಳಗಾದನು. ಕಣಿವೆಯಲ್ಲಿ ಪ್ರತಿಭಟನೆಗಳು ನಡೆದವು, ಸಂಪರ್ಕ ವ್ಯವಸ್ಥೆಗಳು ಸ್ಥಗಿತಗೊಂಡವು ಹಾಗೂ ದೀರ್ಘಾವಧಿ ಬಂದ್‌ಗಳು ನಡೆದವು. ಆ ವರ್ಷ 112 ಯುವ ಪ್ರತಿಭಟನಾಕಾರರು ಪೊಲೀಸ್ ಮತ್ತು ಭದ್ರತಾ ಪಡೆಗಳ ಗುಂಡುಗಳಿಗೆ ಬಲಿಯಾದರು ಹಾಗೂ ಬಾಲಕಿಯರು ಸೇರಿದಂತೆ 1,200 ತರುಣರು ಪೆಲೆಟ್‌ಗಳಿಂದಾಗಿ ಕಣ್ಣುಗಳನ್ನು ಕಳೆದುಕೊಂಡರು.
ಸೈಫುದ್ದೀನ್‌ಗೆ ಮೊದಲ ಸಾಲುಗಳಿಗಿಂತ ಮುಂದಕ್ಕೆ ಹಾಡನ್ನು ಬರೆಯಲು ಸಾಧ್ಯವಾಗಲಿಲ್ಲ. ಆ ಹಾಡನ್ನು ಪೂರ್ಣಗೊಳಿಸಲು ಅವರಿಗೆ ತಿಂಗಳುಗಳೇ ಬೇಕಾಯಿತು ಹಾಗೂ ಅದರ ಸಂಗೀತ ವೀಡಿಯೊವನ್ನು ಬಿಡುಗಡೆಗೊಳಿಸಲು ನಾಲ್ಕು ವರ್ಷಗಳೇ ಬೇಕಾಯಿತು. ಸಂಗೀತ ವೀಡಿಯೊ 2020 ಮೇ ತಿಂಗಳಲ್ಲಿ ಬಿಡುಗಡೆಗೊಂಡಿತು. ಅವರು 2019ರ ಆಗಸ್ಟ್‌ನಲ್ಲಿ ವೀಡಿಯೊವನ್ನು ಬಿಡುಗಡೆಗೊಳಿಸಬೇಕಾಗಿತ್ತು. ಆದರೆ, 2019 ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಣಿವೆಯಲ್ಲಿ ಉಂಟಾದ ಸಂಪರ್ಕ ಸ್ಥಗಿತವು ಕಾಶ್ಮೀರಿಗಳನ್ನು ಹೊರಜಗತ್ತಿನಿಂದ ದೂರವಿರಿಸಿತು. ಹಾಗಾಗಿ ಅವರಿಗೆ ತನ್ನ ಗಡುವನ್ನು ಪೂರೈಸಲು ಸಾಧ್ಯವಾಗಲಿಲ್ಲ.
ಹಾಡು ಈಗಲೂ ಭರವಸೆಯೊಂದಿಗೆ ಆರಂಭಗೊಳ್ಳುತ್ತದೆ. ಆದರೆ, ಅದೇ ವೇಳೆ ಕವಿಯು ತನ್ನ ತಾಯ್ನಡಿನ ರಾಜಕೀಯವನ್ನು ತನ್ನ ಹಾಡಿನೊಳಗೆ ತಂದಿದ್ದಾರೆ. ಇದನ್ನು ಕಣಿವೆಯ ಹೆಚ್ಚಿನ ಕಲಾವಿದರು ಮಾಡಲು ಹೋಗುವುದಿಲ್ಲ.
ಈ ಸಂಗೀತ ವೀಡಿಯೊದಲ್ಲಿ ನಾವು ಸುಂದರ ನೀರಿನ ತೊರೆಗಳು, ಪರ್ವತಗಳನ್ನು ನೋಡುತ್ತೇವೆ. ಸೈಫುದ್ದೀನ್ ಬೈಕಿನಲ್ಲಿ ತನ್ನ ದೊರಗು ಧ್ವನಿಯಲ್ಲಿ ಕಾಶ್ಮೀರದ ಸೌಂದರ್ಯವನ್ನು ಹೊಗಳಿ ಹಾಡುತ್ತಾ ಪ್ರಸಿದ್ಧ ಬೋಲ್‌ವಾರ್ಡ್ ರಸ್ತೆಯಲ್ಲಿ ಸಾಗುವುದನ್ನು ನಾವು ನೋಡುತ್ತೇವೆ. ಹಾಡಿನ ಮಧ್ಯದಲ್ಲಿ ಶವ ಮೆರವಣಿಗೆಯ ತುಣುಕುಗಳು ಒಂದು ಕ್ಷಣ ಪರದೆಯನ್ನು ಆವರಿಸುತ್ತದೆ ಹಾಗೂ ಸಾಹಿತ್ಯವು ನೋವಿನ ಉಪಮೆಗಳಿಗೆ ಬದಲಾಗುತ್ತದೆ. ಈ ಪರಿವರ್ತನೆಯು ದಿಢೀರನೆ ನಡೆಯುತ್ತದಾದರೂ ಯಾವುದೇ ಲೋಪವಿಲ್ಲದೆ ನಡೆಯುತ್ತದೆ. ಕಳೆದ ದಶಕದಲ್ಲಿ ಕಣಿವೆಯಲ್ಲಿ ಹತರಾದ ಕೆಲವು ಮಕ್ಕಳು ಮತ್ತು ಯುವಕರ ಚಿತ್ರಗಳು ಪರದೆಯಲ್ಲಿ ವೇಗವಾಗಿ ಹಾದು ಹೋಗುತ್ತವೆ. ಬಹುಷಃ ಇದುವೇ ಈ ವೀಡಿಯೊದ ಅತ್ಯಂತ ಗಮನ ಸೆಳೆಯುವ ದೃಶ್ಯಗಳಾಗಿವೆ. ಅದು ತುಫಾಲಿ ಮಟ್ಟೂ (2010ರಲ್ಲಿ ಆತನ ಹತ್ಯೆಯಾದಾಗ ಆತನಿಗೆ 17 ವರ್ಷ) ಮತ್ತು ವಾಮಿಕ್ ಫಾರೂಕ್ (2010ರಲ್ಲಿ ಹತ್ಯೆಯಾದಾಗ ಆತನಿಗೆ 13 ವರ್ಷ)ರ ಚಿತ್ರಗಳೊಂದಿಗೆ ಆರಂಭಗೊಳ್ಳುತ್ತದೆ ಹಾಗೂ ಬಾಸಿಮ್ ಅಯಜಾಝ್‌ರ ಚಿತ್ರದೊಂದಿಗೆ ಕೊನೆಗೊಳ್ಳುತ್ತದೆ. ಎನ್‌ಕೌಂಟರ್ ಸ್ಥಳವೊಂದರಲ್ಲಿ ಗೋಡೆಯೊಂದು ಕುಸಿದು ತೀವ್ರ ಸುಟ್ಟ ಗಾಯಗಳೊಂದಿಗೆ ಆತ ಮೃತಪಟ್ಟಾಗ ಅಯಜಾಝ್‌ಗೆ 13 ವರ್ಷ ಪ್ರಾಯ. ನಾಲ್ಕು ಸೆಕೆಂಡ್‌ಗಳ ತುಣುಕಿನಲ್ಲಿ ಒಟ್ಟು 10 ಮೃತ ಕಾಶ್ಮೀರಿಗಳ ಚಿತ್ರಗಳನ್ನು ತೋರಿಸುತ್ತದೆ.
ಸೈಫುದ್ದೀನ್ ಹಾಡುತ್ತಾರೆ: ‘‘ಅರಳುವ ಹೂವುಗಳು ಮೊಳಕೆಯಲ್ಲೇ ಮುರುಟಿಹೋಗಿವೆ/ ಆ ಹೂವುಗಳನ್ನು ಪ್ರತಿ ಸಂದರ್ಭದಲ್ಲೂ ನೆನಪಿಸೋಣ’’.
ಇನ್ನೊಂದು ದೃಶ್ಯದಲ್ಲಿ ನಾಪತ್ತೆಯಾದವರ ಸಂಬಂಧಿಕರು ನಾಪತ್ತೆಯಾವರ ಚಿತ್ರಗಳನ್ನು ಹಿಡಿಯುವುದನ್ನು ತೋರಿಸಲಾಗಿದೆ. ಇದು ದಶಕಗಳಿಂದ ಕಾಶ್ಮೀರದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ವಿಷಯವಾಗಿದೆ. ಇಂತಹ ದೃಶ್ಯಗಳು ಈಗ ಅಲ್ಲಿ ಸಾಮಾನ್ಯವೆಂಬಂತೆ ಆಗಿದೆ. ಅಂತಿಮವಾಗಿ ಭರವಸೆ ಮತ್ತು ಕಾಶ್ಮೀರಿಗಳ ಬಯಕೆಯೊಂದಿಗೆ ಹಾಡು ಕೊನೆಗೊಳ್ಳುತ್ತದೆ.
ಈ ಹಾಡನ್ನು ಬರೆಯಲು ನನಗೆ ತುಂಬಾ ಸಮಯ ಬೇಕಾಯಿತು’’ ಎಂದು ಸೈಫುದ್ದೀನ್ ಹೇಳುತ್ತಾರೆ. ‘‘ಅತ್ಯಂತ ಧನಾತ್ಮಕ ಮನೋಭಾವದೊಂದಿಗೆ ನಾನು ಈ ಹಾಡನ್ನು ಬರೆದಿದ್ದೇನೆ. ಆದರೆ ಕಾಶ್ಮೀರದಲ್ಲಿ ಈ ಮನೋಭಾವವು ಧನಾತ್ಮಕವಾಗಿಯೇ ಉಳಿಯಲಿದೆ. ಅಲ್ಲಿ ನಾಗರಿಕರ ಹತ್ಯೆಗಳು ನಡೆದಿವೆ. ನಾನು ಬರೆದೆ: ‘ಗುಲ್ ತೇಯೇ ಗುಲ್ಝಾರ್ ಯೆಮೌ ರೌತ್ ಮಝಾರ್’ (ಅರಳುವ ಹೂವುಗಳು ಮೊಳಕೆಯಲ್ಲೇ ಮುರುಟಿ ಹೋಗಿವೆ). ಕಾಶ್ಮೀರದಲ್ಲಿ ಕಾಶ್ಮೀರಿಗಳ ಜೀವನದಲ್ಲಿ ಈ ಮಿಶ್ರ ಭಾವನೆಗಳಿವೆ. ಒಂದು ದಿನ ಕಾಶ್ಮೀರಿಯೋರ್ವ ಎಲ್ಲವೂ ಸರಿಯಾಗಿದೆ ಎಂಬಂತೆ ಸಂತೋಷದಿಂದ ಸುತ್ತಾಡುತ್ತಾನೆ, ಆದರೆ ಮರುದಿನ ಏನಾದರೊಂದು ನಡೆಯುತ್ತದೆ ಹಾಗೂ ಅದು ಆತನಿಂದ ಎಲ್ಲವನ್ನೂ ಕಿತ್ತುಕೊಳ್ಳುತ್ತದೆ’’ ಎಂದು ಸೈಫುದ್ದೀನ್ ಹೇಳುತ್ತಾರೆ.
29 ವರ್ಷದ ಸೈಫುದ್ದೀನ್ ಚಿಕ್ಕಂದಿನಲ್ಲೇ ಸಂಗೀತದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಪ್ರವಾದಿ ಮುಹಮ್ಮದರ ಮೊಮ್ಮಗ ಹುಸೈನ್‌ರ ಬಲಿದಾನದ ಬಗ್ಗೆ ಅವರು ಬರೆದ ನವಾಹ್‌ಗಳು ಕಾಶ್ಮೀರದ ಹಸನಾಬಾದ್‌ನಲ್ಲಿ ಜನಪ್ರಿಯವಾಗಿವೆ. ಅವರು ದಿಲ್ಲಿ ವಿಶ್ವವಿದ್ಯಾನಿಲಯದ ದಕ್ಷಿಣ ಕ್ಯಾಂಪಸ್‌ನಿಂದ ಕಲಾ ವಿಭಾಗದಲ್ಲಿ ಸ್ನಾತಕ ಪದವಿ ಪಡೆದು 2014ರಲ್ಲಿ ಕಾಶ್ಮೀರಕ್ಕೆ ವಾಪಸಾದರು. ಬಳಿಕ ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರ್ಪಡೆಗೊಂಡರು.
ಅವರ ಹಾಡು ‘ಅಸಾನ್ ಗಿಂದಾನ್’ ಕೊನೆಗೂ 2020ರ ಮೇ ತಿಂಗಳಲ್ಲಿ ಬಿಡುಗಡೆಗೊಂಡಿತು. ಅಂದರೆ ಸಂವಿಧಾನದ 370ನೇ ವಿಧಿ ರದ್ದುಗೊಂಡ ಒಂದು ವರ್ಷದ ಬಳಿಕ. ಕಳೆದ ಮೂರು ದಶಕಗಳಿಂದ ಅಗಾಧ ಯಾತನೆ ಅನುಭವಿಸುತ್ತಿರುವ, ಆದರೂ ಭರವಸೆಯನ್ನು ಕಳೆದುಕೊಳ್ಳದ ಕಾಶ್ಮೀರಿಗಳಿಗೆ ಸಲ್ಲಿಸುವ ಗೌರವದಂತೆ ಸೈಫುದ್ದೀನ್ ಈ ಹಾಡನ್ನು ಪರಿಗಣಿಸುತ್ತಾರೆ. ಸುತ್ತಮುತ್ತಲಿನ ಆಘಾತಕಾರಿ ಸನ್ನಿವೇಶಗಳ ನಡುವೆಯೂ ಕಾಶ್ಮೀರಿಗಳು ಬದುಕುತ್ತಿರುವುದು ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದೇ ಒಂದು ಪ್ರತಿರೋಧ ಎಂಬುದಾಗಿ ನಾನು ಭಾವಿಸುತ್ತೇನೆ. ನಮ್ಮ ಅಸ್ತಿತ್ವವೇ ಪ್ರತಿರೋಧ. ಅಸಾನ್ ಗಿಂದಾನ್ ಈ ಅಸ್ತಿತ್ವಕ್ಕೆ ಸಲ್ಲಿಸುವ ಗೌರವವಾಗಿದೆ’’ ಎಂದು ಸೈಫುದ್ದೀನ್ ಹೇಳಿದರು.
‘‘ಕಾಶ್ಮೀರದ ಈಗಿನ ಹೆಚ್ಚಿನ ಕಲಾವಿದರು ಅಲ್ಲಿನ ರಾಜಕೀಯವನ್ನು ತಮ್ಮ ಕೃತಿಗಳಲ್ಲಿ ಅಂತರ್ಗತವಾಗಿ ವ್ಯಕ್ತಪಡಿಸುತ್ತಾರೆ. ಆದರೆ ನೇರವಾಗಿ ಹಾಗೂ ಸ್ಪಷ್ಟವಾಗಿ ಹೇಳಲು ಹಿಂಜರಿಯುತ್ತಾರೆ. ಆದರೆ, ಸೈಫುದ್ದೀನ್ ರಾಜಕೀಯವನ್ನು ನೇರವಾಗಿ ಯಾವುದೇ ಮುಚ್ಚುಮರೆಯಿಲ್ಲದೆ ಅಭಿವ್ಯಕ್ತಗೊಳಿಸಲು ಬಯಸುತ್ತಾರೆ. ಕಾಶ್ಮೀರದಂತಹ ಸ್ಥಳದಲ್ಲಿ ಸಂಗೀತದ ಜವಾಬ್ದಾರಿ ಹೆಚ್ಚಾಗಿದೆ. ನನ್ನ ಹಾಡುಗಳು ದಮನಿತರ ಚಿತ್ರಣವಾಗಿದೆ. ಅದುವೇ ನನ್ನ ರಾಜಕೀಯ. ನಾನು ಅದನ್ನು ಯಾವಾಗಲೂ ಗಮನದಲ್ಲಿರಿಸುತ್ತೇನೆ. ಇದು, ಆರೋಪಿಸಲಾಗುತ್ತಿರುವಂತೆ, ಭಾವನೆಗಳನ್ನು ಉದ್ರೇಕಿಸಲು ಅಲ್ಲ. ಇದರಲ್ಲಿ ಹಣಕಾಸು ಲಾಭಇಲ್ಲ. ಇದರಿಂದಾಗಿ ನೀವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿ ಸುವುದೇ ಜಾಸ್ತಿ. ಆದರೆ, ಇದು ನನಗೆ ಆಂತರಿಕ ತೃಪ್ತಿಯನ್ನು ನೀಡುತ್ತದೆ’’ ಎನ್ನುತ್ತಾರೆ.
www.outlookindia.com







