ನ್ಯಾಯಕ್ಕೆ ಆಗ್ರಹಿಸಿ ಸರಕಾರದ ಪರಿಹಾರವನ್ನು ತಿರಸ್ಕರಿಸಿದ ನಾಗಾಲ್ಯಾಂಡ್ ಸಂತ್ರಸ್ತ ಕುಟುಂಬಗಳು

ಸಾಂದರ್ಭಿಕ ಚಿತ್ರ
ಕೊಹಿಮಾ: ಇತ್ತೀಚೆಗೆ ಸೇನಾಪಡೆಗಳ ವಿವಾದಾತ್ಮಕ ಕಾರ್ಯಾಚರಣೆಗೆ ಕಾರಣರಾದ ಸೇನಾ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವವರಿಗೆ ಈ ಘಟನೆಯಲ್ಲಿ ಬಲಿಯಾದ 14 ಮಂದಿ ನಾಗರಿಕರ ಕುಟುಂಬಗಳು ಸರಕಾರದಿಂದ ನೀಡಲಾಗುವ ಪರಿಹಾರವನ್ನು ಸ್ವೀಕರಿಸುವುದಿಲ್ಲ ಎಂದು ಸಂತ್ರಸ್ತ ಕುಟುಂಬಗಳು ಹಾಗೂ ವಿಲೇಜ್ ಕೌನ್ಸಿಲ್ ಘೋಷಿಸಿವೆ.
"ಡಿಸೆಂಬರ್ 5ರಂದು ಸಂತ್ರಸ್ತರ ಕುಟುಂಬಗಳು ಹಾಗೂ ಗ್ರಾಮಸ್ಥರು ಮೃತಪಟ್ಟವರ ಅಂತ್ಯಕ್ರಿಯೆಗೆ ಏರ್ಪಾಟು ಮಾಡುತ್ತಿದ್ದಾಗ ರಾಜ್ಯ ಸಚಿವ ಪಿ ಪೈವಾಂಗ್ ಕೊನ್ಯಕ್ ಮತ್ತು ಜಿಲ್ಲಾಧಿಕಾರಿ ರೂ 18.30 ಲಕ್ಷ ಪರಿಹಾರ ನೀಡಿದ್ದರು. ಆರಂಭದಲ್ಲಿ ಇದು ಸಚಿವರು ಅನುಕಂಪದಿಂದ ನೀಡಿದ್ದು ಎಂದು ಜನರು ಅಂದುಕೊಂಡರೆ ನಂತರ ಇದು ಸರಕಾರದಿಂದ ಪರಿಹಾರದ ಮೊದಲ ಕಂತು ಎಂದು ತಿಳಿದು ಬಂತು. ಸೇನಾ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ಇಡೀ ಈಶಾನ್ಯ ಭಾರತದಿಂದ ವಾಪಸ್ ಪಡೆಯುವ ತನಕ ಹಾಗೂ ಕಾರ್ಯಾಚರಣೆಗೆ ಕಾರಣರಾದ ಭಾರತೀಯ ಸೇನೆಯ 21ನೇ ಪ್ಯಾರಾ ಕಮಾಂಡೋಗಳ ವಿರುದ್ಧ ಕ್ರಮಕೈಗೊಳ್ಳುವ ತನಕ ಈ ಪರಿಹಾರ ಮೊತ್ತವನ್ನು ಮೃತರ ಕುಟುಂಬಗಳು ಸ್ವೀಕರಿಸುವುದಿಲ್ಲ ಎಂದು ಓಟಿಂಗ್ ವಿಲೇಜ್ ಕೌನ್ಸಿಲ್ ನಿರ್ಧರಿಸಿದೆ" ಎಂದು ಹೇಳಿಕೊಂದರಲ್ಲಿ ತಿಳಿಸಲಾಗಿದೆ.
ಕೌನ್ಸಿಲ್ ಅಧ್ಯಕ್ಷ ಲೊಂಗ್ವಾಂಗ್ ಕೊನ್ಯಕ್ ಮತ್ತಿತರ ಪ್ರಮುಖರು ಈ ಹೇಳಿಕೆಗೆ ಸಹಿ ಹಾಕಿದ್ದಾರೆ. ಮೃತರ ಕುಟುಂಬಗಳಿಗೆ ನಾಗಾಲ್ಯಾಂಡ್ ಸರಕಾರ ರೂ 5 ಲಕ್ಷ ಪರಿಹಾರ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.