ಪ್ರಧಾನಿ ಮೋದಿ, ಆದಿತ್ಯನಾಥ್ ಚರಿತ್ರೆಯನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ: ಎಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು, ಡಿ.13: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಧಿತ್ಯನಾಥ್ ಚರಿತ್ರೆಯನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಿಸಿರುವುದು ಸ್ವಾಗತಾರ್ಹ, ಆದರೆ ನೂರಾರು ವರ್ಷಗಳ ಹಿಂದೆ ಬೇರೆ ಬೇರೆ ಧರ್ಮದ ರಾಜರುಗಳು ಧ್ವಂಸ ಮಾಡಿದ್ದ ಕಾಶಿ ವಿಶ್ವನಾಥನ ದೇವಾಲಯವನ್ನು 14ನೇ ಶತಮಾನದಲ್ಲಿ ಪುನರ್ ನಿರ್ಮಿಸಿದ್ದ ಅಂದಿನ ಮಧ್ಯ ಪ್ರದೇಶದ ಮಹಾರಾಣಿ ಅಹಲ್ಯಬಾಯಿ ಹೂಡ್ಕರ್ ಅವರನ್ನು ಈ ಸಂದರ್ಭದಲ್ಲಿ ಮರೆತಿರುವುದು ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರಣಾಸಿ ಮತ್ತು ಕಾಶಿ ವಿಶ್ವನಾಥನ ದೇವಸ್ಥಾನವನ್ನು ಉಳಿಸಿ ಕಟ್ಟಿ ಹಿಂದೂಗಳ ಅಸ್ಮಿತೆಯನ್ನು ಬಲಪಡಿಸಿದ ಹಿಂದುಳಿದ ವರ್ಗಕ್ಕೆ ಸೇರಿದ ರಾಣಿ ಅಹಲ್ಯಬಾಯಿ ಹೂಡ್ಕರ್ ರನ್ನು ಏಕೆ ಮರೆತಿರಿ? ಕಾಶಿ ವಿಶ್ವನಾಥ ಕಾರಿಡಾರ್ ವೇಳೆ ಆಕೆಯ ಹೆಸರು ಎಲ್ಲಿಯೂ ಪ್ರಸ್ತಾಪ ಇಲ್ಲ ಯಾಕೆ? ಆಕೆ ಒಬ್ಬ ಹಿಂದುಳಿದವಳು, ಕುರುಬ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮರೆತಿರಾ? ಎಂದು ಪ್ರಶ್ನಿಸಿದರು.
ಅಹಲ್ಯಬಾಯಿ ಹೂಡ್ಕರ್ ಓರ್ವ ಹಿಂದೂ ಹೆಣ್ಣುಮಗಳಾಗಿ ಕಾಶಿ ದೇವಸ್ಥಾನವನ್ನು ಉಳಿಸಿದಳು, ಇವರ ಆಡಳಿತದಲ್ಲಿ ಶಿವನ ಸ್ಮರಣೆ ಮಾಡಿ ಆಡಳಿತ ನಡೆಸಿದವರು. ಬೆಳಗ್ಗೆ ಎದ್ದ ತಕ್ಷಣ ಶಿವನ ಜ್ಞಾನ ಮಾಡಿ ತಮ್ಮ ತಿಜೋರಿ ತೆಗೆಯುವ ವೇಳೆ ಶಿವನ ನೆನೆಸಿಕೊಂಡು ತುಳಸಿ ಹಾಕುತ್ತಿದ್ದವರು. ತಮ್ಮ ಕೈಯಲ್ಲಿ ಶಿವನ ಮೂರ್ತಿಯ ಕೋಲು ಹಿಡಿದುಕೊಂಡು ಹೋಗುತ್ತಿದ್ದರು. ಇದನ್ನು ನಾನು ಹೇಳುತಿಲ್, ಗೆಜೆಟಿಯರ್‌ನಲ್ಲೇ ದಾಖಲಾಗಿದೆ. ಇಂತಹ ಹಿಂದೂ ಮಹಿಳೆ ಬಗ್ಗೆ ನಿಮಗೆ ಸಲಹೆ ನೀಡುವ ವಿದ್ವಾಂಸರು ಯಾಕೆ ನೆನಪಿಸಲಿಲ್ಲ? ಎಂದರು.
ಹಿಂದೂ ಸ್ತ್ರೀಯನ್ನು ಮರೆಯಬಾರದು, ಮರೆತರೆ ಚರಿತ್ರೆ ಮರೆತಂತೆ, ನೀವೇನು ಚರಿತ್ರೆ ಮುಚ್ಚಿಹಾಕಲು ಹೊರಟಿದ್ದೀರ ಎಂದು ಹರಿಹಾಯ್ದರು.
ಕಾಶಿವಿಶ್ವನಾಥ ಕಾರಿಡಾರ್ ಉತ್ತರ ಪ್ರದೇಶದ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡುತ್ತಿದ್ದೀರಿ, ಆದೇನಾದರೂ ಆಗಲಿ ದೇಶಕ್ಕೆ ಕುರುಬರ ಕೊಡುಗೆ ಬಹಳಷ್ಟಿದೆ. ಉತ್ತರ ಪ್ರದೇಶದ ಒಂದರಲ್ಲೇ 1.5 ಕೋಟಿ ಕುರುಬರು ಇದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಮರೆತಿದ್ದೀರಿ? ಇದನ್ನು ನೀವು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮೋದಿಯವರೆ ಕೂಡಲೇ ನೀವು ಪ್ರತಿನಿಧಿಸುತ್ತಿರುವ ವಾರಣಾಸಿಯಲ್ಲಿ ಅಹಲ್ಯಬಾಯಿ ಅವರ ಪ್ರತಿಮೆ ನಿರ್ಮಾಣ ಆಗಬೇಕು, ವಾರಣಾಸಿ ವಿಮಾನ ನಿಲ್ದಾಣಕ್ಕೆ ಅಹಲ್ಯಬಾಯಿ ಹೆಸರಿಡಬೇಕು ಎಂದು ಎಚ್.ವಿಶ್ವನಾಥ್ ಒತ್ತಾಯಿಸಿದರು.







