ಅಸ್ಸಾಂ:ಅಪಹರಣದ ಆರೋಪಿಯನ್ನು ಕೊಂದ ಭದ್ರತಾ ಪಡೆಗಳು

Photo: AFP
ಹೊಸದಿಲ್ಲಿ: ಓರ್ವ ವ್ಯಕ್ತಿಯನ್ನು ಅಪಹರಿಸಿದ ಗ್ಯಾಂಗ್ನ ಸದಸ್ಯನೊಬ್ಬನನ್ನು ಭದ್ರತಾ ಪಡೆಗಳು ರವಿವಾರ ಕೊಂದಿದ್ದಾರೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ ಎಂದು ಅಪರಿಚಿತ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಕನಿಯಾ ಎಂಗ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರವಿವಾರ ಮಧ್ಯಾಹ್ನ 1 ರಿಂದ 2 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ಕರ್ಬಿ ಆಂಗ್ಲಾಂಗ್ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್ Scroll.in ಗೆ ತಿಳಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಅಪಹರಣಕ್ಕೊಳಗಾದವರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಂಪನಿಯೊಂದರ ಉದ್ಯೋಗಿ.
ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಸಮೀಪಿಸುತ್ತಿರುವುದನ್ನು ಕಂಡ ಶಂಕಿತ ವ್ಯಕ್ತಿ ಗುಂಡು ಹಾರಿಸಿದ ಎಂದು ಅಸ್ಸಾಮಿ ಸುದ್ದಿ ವಾಹಿನಿ ಪ್ರತಿದಿನ್ ಟೈಮ್ ವರದಿ ಮಾಡಿದೆ.
ಪ್ರತೀಕಾರವಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು, ವ್ಯಕ್ತಿ ಗಾಯಗೊಂಡಿದ್ದಾನೆ. ಆತ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.