ಕೊಣಾಜೆ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಿಂದ ಹಾಜಬ್ಬರಿಗೆ ಸನ್ಮಾನ
ಹಾಜಬ್ಬ ಎಲ್ಲರಿಗೂ ಮಾದರಿಯಾಗಿದ್ದಾರೆ: ಮುಖ್ತಾರ್ ಪಠಾಣ್

ಕೊಣಾಜೆ: ಪದ್ಮಶ್ರೀ ಪ್ರಶಸ್ತಿ ಪಡೆದ ಹಾಜಬ್ಬರ ಸರಳತೆಗೆ ಇನ್ಯಾರೂ ಸಾಟಿಯಲ್ಲ. ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ್ ಅಭಿಪ್ರಾಯಪಟ್ಟರು.
ಸೋಮವಾರ ಹರೇಕಳದಲ್ಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ಭೇಟಿ ನೀಡಿ ಸನ್ಮಾನ ಮಾಡಿ ಮಾತನಾಡಿದರು.
ಹಳ್ಳಿ ಮಕ್ಕಳಿಗೂ ಶಿಕ್ಷಣ ಸಿಗಬೇಕೆನ್ನುವ ಕನಸು ಕಂಡು ಹಣ್ಣು ಮಾರಿ ಉಳಿದ ಹಣದಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಹಾಜಬ್ಬ ನಮಗೆಲ್ಲರಿಗೂ ದಾರಿದೀಪವಾಗಿದ್ದಾರೆ. ಇಂತಹ ಸರಳ, ಸಜ್ಜನಿಕೆಯ ವ್ಯಕ್ತಿಗೆ ಪದ್ಮಶ್ರೀ ಪುರಸ್ಕಾರ ಬಂದಿರುವುದರಿಂದ ಪುರಸ್ಕಾರಕ್ಕೂ ವಿಶ್ವದಲ್ಲೇ ಗೌರವ ತಂದುಕೊಟ್ಟಿದೆ ಎಂದು ಹೇಳಿದರು.
ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಪ್ರಧಾನಿಯ ಪ್ರೀತಿಗೆ ಚಿರಋಣಿ. ಯಾರಿಗೂ ಬೇಡದ ಬಡವನಾದ ನನ್ನ ಇಂದಿನ ಈ ಸ್ಥಿತಿಗೆ ಹಲವು ಗಣ್ಯರ ಸಹಾಯ, ಸಹಕಾರ ಕಾರಣ. ನಮ್ಮ ಶಾಲೆ ಉಳಿಯಬೇಕಾದರೆ ಕಾಲೇಜು ನಿರ್ಮಾಣದಿಂದ ಮಾತ್ರ ಸಾಧ್ಯ ಎಂದು ಸನ್ಮಾನ ಸ್ವೀಕರಿಸಿದ ಹರೇಕಳ ಹಾಜಬ್ಬ ಹೇಳಿದರು.
ಈ ಸಂದರ್ಭ ಅಲ್ಪಸಂಖ್ಯಾತ ನಿಗಮದ ಸದಸ್ಯ ಸಿರಾಜ್ ಮುಡಿಪು, ರಾಜ್ಯ ಅಲೆಮಾರಿ ಅರೆಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಲ್ಪಸಂಖ್ಯಾತ ಮೋರ್ಚಾದ ಉಳ್ಳಾಲ ವಿಭಾಗ ಅಧ್ಯಕ್ಷ ಅಶ್ರಫ್ ಹರೇಕಳ, ಪ್ರಮುಖರಾದ ಅಝೀಝ್ ಬೈಕಂಪಾಡಿ, ಹನೀಫ್ ನಿಝಾಮಿ ಇನ್ನಿತರರು ಉಪಸ್ಥಿತರಿದ್ದರು.







