ವಿಧಾನ ಪರಿಷತ್ ಚುನಾವಣೆ: ಬೆಂ. ನಗರ ಕ್ಷೇತ್ರದ ಫಲಿತಾಂಶಕ್ಕೆ ನೀಡಿದ್ದ ತಡೆ ತೆರವುಗೊಳಿಸಿದ ಹೈಕೋರ್ಟ್

ಬೆಂಗಳೂರು, ಡಿ.13: ಬೆಂಗಳೂರು ನಗರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಪ್ರಕಟಿಸುವಂತಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ತೆರವು ಮಾಡಿರುವ ಹೈಕೋರ್ಟ್ ವಿಭಾಗೀಯ ಪೀಠ, ಫಲಿತಾಂಶ ಪ್ರಕಟಿಸುವುದಕ್ಕೆ ಸಮ್ಮತಿಸಿದೆ.
ಇದೇ ವೇಳೆ, ಚುನಾವಣಾ ಫಲಿತಾಂಶ ಕುರಿತು ಸಲ್ಲಿಸಿರುವ ಅರ್ಜಿಯು ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿದೆ. ಹೈಕೋರ್ಟ್‍ನ ಈ ತೀರ್ಪಿನಿಂದಾಗಿ ಬೆಂಗಳೂರು ಕ್ಷೇತ್ರದ ಚುನಾವಣೆಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ.
ಪ್ರಕರಣವೇನು?: ಆನೇಕಲ್, ಅತ್ತಿಬೆಲೆ ಹಾಗೂ ಮಹದೇವಪುರ ಪುರಸಭೆಗಳ ನಾಮನಿರ್ದೇಶತ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ನಾಮ ನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಮತದಾನ ಮಾಡಬಹುದು. ಆದರೆ, ಅವರ ಮತಗಳನ್ನು ಪ್ರತ್ಯೇಕವಾಗಿರಿಸಬೇಕು. ಜೊತೆಗೆ ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಪ್ರಕಟಿಸಬಾರದು ಎಂದು ಮಧ್ಯಂತರ ಆದೇಶ ಮಾಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಸಂವಿಧಾನದ ವಿಧಿ 243 (ಆರ್) (2) ನಿಯಮಗಳು ನಾಮನಿರ್ದೇಶಿತ ಸದಸ್ಯರಿಗೆ ಪುರಸಭೆಯ ಸಭೆಯಲ್ಲಿ ಮತದಾನದ ಹಕ್ಕು ಮೊಕಟುಗೊಳಿಸಿದೆಯೇ ಹೊರತು ಇತರೆ ಚುನಾವಣೆಗಳಲ್ಲಿ ಅಲ್ಲ.
ಹೀಗಾಗಿ, ನಾಮನಿರ್ದೇಶಿತರ ಸದಸ್ಯರು ಮತದಾನ ಮಾಡುವುದಕ್ಕೆ ನಿರ್ಬಂಧ ಕೋರಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಮಧ್ಯಂತರ ಆದೇಶ ಸೂಕ್ತವಲ್ಲ ಎಂದು ಆದೇಶವನ್ನು ತೆರವು ಮಾಡಿದೆ. ಇದೇ ವೇಳೆ, ಅರ್ಜಿ ಸಂಬಂಧ ಏಕಸದಸ್ಯ ಪೀಠ ನೀಡಲಿರುವ ತೀರ್ಪಿಗೆ ಚುನಾವಣಾ ಫಲಿತಾಂಶ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿ ಅರ್ಜಿ ಇತ್ಯರ್ಥಪಡಿಸಿತು.







