ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40 ಕಮಿಷನ್: ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಿಲ್ಲ; ಡಿ.ಕೆಂಪಣ್ಣ ಆರೋಪ
ಜನವರಿಯಲ್ಲಿ ಬೃಹತ್ ಪ್ರತಿಭಟನೆ ಎಚ್ಚರಿಕೆ

ಡಿ.ಕೆಂಪಣ್ಣ
ಬೆಂಗಳೂರು, ಡಿ.13: ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಶೇ.40ರಷ್ಟು ಕಮಿಷನ್ ವ್ಯವಹಾರ ನಡೆದಿರುವ ಭ್ರಷ್ಟಾಚಾರವನ್ನು ಕುರಿತು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ. ಗುತ್ತಿಗೆ ಕಾಮಗಾರಿಗಳಲ್ಲಿ ಈಗಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಆದುದರಿಂದ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಮುಂಬರುವ ಜನವರಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅಸೋಸಿಯೇಷನ್ನ ಅಧ್ಯಕ್ಷ ಡಿ.ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಬಿಬಿಎಂಪಿ ನಡೆಸುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಯುತ್ತಿದ್ದು, ಆಡಳಿತ ಪಕ್ಷದ ಜನಪ್ರತಿನಿಧಿಗಳು ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ದೂರು ನೀಡಿದರೂ, ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟಾಚಾರವನ್ನು ಏಕಾಏಕಿ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಆದರೆ, ಹಂತಹಂತವಾಗಿ ಕಡಿವಾಣ ಹಾಕದೇ, ಸರಕಾರವೇ ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಆದುದರಿಂದ ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಇಲ್ಲವಾದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಜನಪ್ರತಿನಿಧಿಗಳು ಸೇರಿದಂತೆ ಉನ್ನತ ಅಧಿಕಾರಿಗಳು, ಅವರ ಏಜೆಂಟರ ಬಗ್ಗೆ ಬಹಿರಂಗಪಡಿಸಲಾಗುವುದು ಎಂದರು.
ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು 22,000 ಕೋಟಿ ರೂ.ಗಳಿಗಿಂತ ಅಧಿಕ ಹಣ ಬಿಡುಗಡೆಯಾಗಬೇಕಾಗಿದೆ. ಕೊರೋನ ನೆಪವೊಡ್ಡಿ ಕಳೆದ ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಹಣ ಮಂಜೂರು ಮಾಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ಕಂಗಾಲಾಗಿದ್ದು, ನಿರ್ವಹಿಸಿದ ಕಾಮಗಾರಿಗಳ ವೆಚ್ಚವನ್ನು ಭರಿಸಲಾಗದೇ ಆತ್ಮಹತ್ಯೆಯ ಮೊರೆಹೋಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ನ ಪದಾಧಿಕಾರಿಗಳಾದ ಆರ್. ಅಂಬಿಕಾಪತಿ, ರಮೇಶ್, ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ಯಾಕೇಜ್ ಪದ್ಧತಿ ಕೈಬಿಡಲು ಒತ್ತಾಯ
ಸರಕಾರವು ಐದು-ಹತ್ತು ಕೋಟಿಗಳ ಹಲವಾರು ಕಾಮಗಾರಿಗನ್ನು ಒಗ್ಗೂಡಿಸಿ, ನೂರಾರು ಕೋಟಿ ಕಾಮಗಾರಿ ಎಂಬ ಹೆಸರಿನಲ್ಲಿ ಪ್ಯಾಕೇಜ್ ಪದ್ಧತಿಯನ್ನು ಜಾರಿಗೊಳಿಸುತ್ತಿದೆ. ಸ್ಥಳೀಯ ಮತ್ತು ರಾಜ್ಯದ ಗುತ್ತಿಗೆದಾರರನ್ನು ಹೊರಗಿಟ್ಟು, ಅನ್ಯ ರಾಜ್ಯದವರಿಗೆ ಮಣೆ ಹಾಕುವ ಕೆಲಸವನ್ನು ಸರಕಾರ ಮಾಡುತ್ತಿದೆ. ಆದುದರಿಂದ ಈ ಪ್ಯಾಕೇಜ್ ಪದ್ಧತಿಯನ್ನು ಸರಕಾರವು ಕೈಬಿಡಬೇಕು. ಹಾಗೆಯೇ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆಯ 4ಜಿ ಅಡಿಯಲ್ಲಿ ವಿನಾಯಿತಿ ನೀಡಿ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೇರವಾಗಿ ನೀಡಲಾಗುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಈ ತಂತ್ರ ಬಳಸಿಕೊಂಡು ತಮ್ಮ ಆಪ್ತರಿಗೆ ನೇರವಾಗಿ ಕಾಮಗಾರಿಗಳನ್ನು ವಹಿಸಲಾಗುತ್ತಿದೆ.
-ಜಿ.ಎಂ. ರವೀಂದ್ರ, ಪ್ರಧಾನ ಕಾರ್ಯದರ್ಶಿ, ಕೆಎಸ್ಸಿಎ
ಶೇ. 70ರಷ್ಟು ಪ್ರಭಾವಿಗಳ ಸಂಬಂಧಿಕರು
ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿಕೊಂಡರೆ, ಗುತ್ತಿಗೆ ಕಾಮಗಾರಿಗಳಲ್ಲಿ ನಮ್ಮ ರಾಜ್ಯದಲ್ಲಿಯೇ ಹೆಚ್ಚಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಗುತ್ತಿಗೆದಾರರಲ್ಲಿ ಶೇ. 70ರಷ್ಟು ಗುತ್ತಿಗೆದಾರರು ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಪ್ರಭಾವಿಗಳ ಸಂಬಂಧಿಕರಾಗಿದ್ದಾರೆ. ಇದು ಒಂದು ರೂಪದ ಭ್ರಷ್ಟಾಚಾರವಾಗಿದೆ. ಇವರಿಗೆ ಲೇಸನ್ಸ್ ಇದೆಯೋ ಇಲ್ಲವೋ ಎಂದು ತನಿಖೆಯಾಗಬೇಕು. ಅಲ್ಲದೆ, ನಿರ್ವಹಿಸಿದ ಕಾಮಗಾರಿಗಳಿಗೆ ಏಜೆಂಟ್ ಮೂಲಕ ಹಣ ನೀಡಿದರೆ ಮಾತ್ರ ಬಿಲ್ ಪಾವತಿಯಾಗುತ್ತಿದೆ. ಇವೆಲ್ಲಾ ಭ್ರಷ್ಟಾಚಾರದ ಕುರಿತು ಕೇವಲ ಇಪ್ಪತ್ತು ದಿನಗಳಲ್ಲಿ ತನಿಖೆಯಾಗಬೇಕಾಗಿದೆ. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು.
-ವಿ. ಕೃಷ್ಣಾರೆಡ್ಡಿ, ಉಪಾಧ್ಯಕ್ಷ, ಕೆಎಸ್ಸಿಎ







