ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿದ ಆರೋಪ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗೆ ಶಿಕ್ಷೆ
7 ವರ್ಷದ ಹಿಂದಿನ ಪ್ರಕರಣ

ಮಂಗಳೂರು: ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿದ ಆರೋಪದ ಮೇರೆಗೆ 7 ವರ್ಷದ ಹಿಂದೆ ಲೋಕಾಯುಕ್ತ ಪೊಲೀಸರಿಂದ ದಾಳಿಗೊಳಗಾಗಿ ವಿಚಾರಣೆ ಎದುರಿಸುತ್ತಿದ್ದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಶಕ್ತಿಮಗರ ಡಿಪೋದ ಕಿರಿಯ ಸಹಾಯಕ ಅಧಿಕಾರಿಗೆ ಶಿಕ್ಷೆ ವಿಧಿಸಿ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.
ಎಂ.ಎನ್. ರಾಜನ್ ನಂಬಿಯಾರ್ ಶಿಕ್ಷೆಗೊಳಗಾದ ಅಧಿಕಾರಿ. ಇವರು ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿದ್ದಾರೆ ಎಂಬ ಆರೋಪವಿತ್ತು. ಈ ಬಗ್ಗೆ ಬಂದ ಮಾಹಿತಿಯ ಮೇರೆಗೆ ಲೋಕಾಯುಕ್ತದ ಡಿವೈಎಸ್ಪಿ ಉಮೇಶ್ ಶೇಟ್ ನೇತೃತ್ವದ ತಂಡವು 2014ರ ಜನವರಿ 28ರಂದು ದಾಳಿ ನಡೆಸಿ ಕಾನೂನು ಕ್ರಮ ಜರಗಿಸಿತ್ತು.
ಅದರಂತೆ ವಿಚಾರಣೆ ನಡೆಸುತ್ತಿದ್ದ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವ ನ್ಯಾಯಾಧೀಶ ಬಿ.ಬಿ.ಜಕಾತಿ ಆರೋಪಿ ರಾಜನ್ ನಂಬಿಯಾರ್‌ಗೆ 6 ವರ್ಷ ಶಿಕ್ಷೆ ಮತ್ತು 75 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ ಮತ್ತೆ 2 ವರ್ಷ ಶಿಕ್ಷೆ ಅನುಭವಿಸಲು ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರವೀಂಧ್ರ ಮನ್ನಿಪ್ಪಾಡಿ ವಾದಿಸಿದ್ದರು.





