ಸಾರಿಗೆ ನಿಗಮಗಳಲ್ಲಿ ಮಾನವೀಯತೆ ಕೊರತೆ: ಸಾರಿಗೆ ನೌಕರರ ಆರೋಪ
ಬೆಂಗಳೂರು, ಡಿ.13: ಕಳೆದ ಎರಡು ವರ್ಷಗಳಿಂದ ರಾಜ್ಯದ ಸಾರಿಗೆ ನಿಗಮಗಳಲ್ಲಿ ಮಾನವೀಯತೆ ಕೊರತೆ ಎದ್ದು ಕಾಣುತ್ತಿದ್ದು, ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಾರಿಗೆ ನಿಗಮಗಳಲ್ಲಿ ದಿನದಿಂದ ದಿನಕ್ಕೆ ಕಾರ್ಮಿಕ ಶೋಷಣೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಂತ-ಹಂತವಾಗಿ ಧರಣಿ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಮಹಾ ಪ್ರಧಾನ ಕಾರ್ಯದರ್ಶಿ ಬಿ. ಜಯದೇವರಾಜ ಅರಸು ತಿಳಿಸಿದ್ದಾರೆ.
ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಾರಿಗೆ ನಿಗಮಗಳ ನೌಕರರ ಜೀವನ ಇಂದು ದುಸ್ತರವಾಗಿದೆ. ಮಾನವೀಯತೆಯನ್ನು ಮರೆತ ಸರಕಾರವು ಅವರನ್ನು ಶೋಷಣೆ ಮಾಡುತ್ತಿದೆ. ಇದನ್ನು ಖಂಡಿಸಿ, ನಿಗಮಗಳ ಕೇಂದ್ರ ಕಚೇರಿಗಳ ಆವರಣದಲ್ಲಿ ಡಿ.28ರಂದು ಶಾಂತಿಯುತ ಧರಣಿ ನಡೆಸಲಾಗುವುದು. ಈ ಶಾಂತಿಯುತ ಹೋರಾಟಕ್ಕೆ ಸರಕಾರವು ಸ್ಪಂದಿಸದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಸರಕಾರವು ಸಾರಿಗೆ ನೌಕರರಿಗೆ ಸರಕಾರದ 6ನೇ ವೇತನ ಪಾವತಿಸಬೇಕು. ವಜಾ ಮಾಡಿರುವ ನೌಕರರನ್ನು ಪುನಾಃ ಕೆಲಕ್ಕೆ ಸೇರಿಸಿಕೊಳ್ಳಬೇಕು. ಸಾರಿಗೆ ನೌಕರರ ಮೇಲೆ ದಾಖಲಾಗಿರುವ ಪೊಲೀಸ್ ಮೊಕದಮೆಗಳನ್ನು ಹಿಂಪಡೆಯಬೇಕು. ಕಾನೂನುಬಾಹಿರವಾಗಿ ಮಾಡಿದ ವರ್ಗಾವಣೆಯನ್ನು ರದ್ದು ಮಾಡಬೇಕು. ಪೂರ್ಣ ಪ್ರಮಾಣದ ವೇತನವನ್ನು ನೀಡಬೇಕು, ಎಂದು ಬೇಡಿಕೆಯಿಟ್ಟ ಅವರು, ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಕಣ್ಮುಚ್ಚಿ ಕುಳಿತ ಸರಕಾರ
ಕಳೆದ ವರ್ಷ ಡಿಸೆಂಬರ್ ಮತ್ತು 2021ರ ಏಪ್ರಿಲ್ ತಿಂಗಳಲ್ಲಿ ಮುಷ್ಕರನಿರತ ಸಾವಿರಾರು ಅಮಾಯಕ ಸಾರಿಗೆ ನೌಕರರನ್ನು ಸರಾಕಾರವು ಕಾನೂನುಬಾಹಿರವಾಗಿ ವಜಾಗೊಳಿಸಲಾಗಿದೆ. ವಜಾಗೊಂಡಿರುವ ನೌಕಕರಲ್ಲಿ ಬಹುತೇಕ ಮಂದಿ ಯುವ ಕಾರ್ಮಿಕರಾಗಿದ್ದು, ಅವರ ಭವಿಷ್ಯ ಈಗ ಹಾಳಾಗಿದೆ. ಅಲ್ಲದೆ, ಕೆಲವರ ಮೇಲೆ ಪೊಲೀಸ್ ಮೊಕದಮೆಗಳನ್ನು ಹೂಡಲಾಗಿದ್ದು, ಅವರ ಜೀವನ ದುಸ್ತರವಾಗಿದೆ. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಾರಿಗೆ ನೌಕರರಿಗೆ ನಿಗಮಗಳು ಅರ್ಧ ಸಂಬಳವನ್ನು ಪಾವತಿ ಮಾಡುತ್ತಿದ್ದು, ಸರಕಾರಕ್ಕೆ ಇದು ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿರುವುದಾರೂ ಏಕೆ?
-ಡಾ. ಕೆ.ಎಸ್. ಶರ್ಮಾ, ಅಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ







