ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಗುಳಿದ ರೋಹಿತ್ ಶರ್ಮಾ

ಹೊಸದಿಲ್ಲಿ, ಡಿ.13: ಮುಂಬೈನಲ್ಲಿ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾಗ ಹಳೆಯ ಗಾಯದ ಸಮಸ್ಯೆ ಮರುಕಳಿಸಿದ ಹಿನ್ನೆಲೆಯಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ ಮುಂಬರುವ ದಕ್ಷಿಣ ಆಫ್ರಿಕ ವಿರುದ್ದದ 3 ಪಂದ್ಯಗಳ ಟೆಸ್ಟ್ ಸರಣಿಯಿಂದಲೇ ಹೊರಗುಳಿದಿದ್ದಾರೆ.
ಡಿಸೆಂಬರ್ 26ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಪ್ರಿಯಾಂಕ್ ಪಾಂಚಾಲ್‌ಗೆ ಕರೆ ನೀಡಲಾಗಿದೆ. ಪಾಂಚಾಲ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಟೆಸ್ಟ್ ಪಂದ್ಯದಲ್ಲಿ 96 ರನ್ ಗಳಿಸಿದ್ದರು ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಮುಂಬೈನಲ್ಲಿ ನೆಟ್ ಪ್ರಾಕ್ಟೀಸ್ ನಡೆಸುತ್ತಿದ್ದಾಗ 34ರ ಹರೆಯದ ರೋಹಿತ್ ನೆಟ್ ಭಾಯ್ ರಘು ಅವರಿಂದ ಥ್ರೋ ಡೌನ್ ಪಡೆಯುತ್ತಿದ್ದಾಗ ಕೈಗಳಿಗೆ ಚೆಂಡು ಅಪ್ಪಳಿಸಿದೆ. ರೋಹಿತ್‌ಗೆ ಕೈಗೆ ಗಾಯವಾಗಿತ್ತು. ಆದಾಗ್ಯೂ ಅವರು ಬ್ಯಾಟಿಂಗ್ ಅಭ್ಯಾಸ ಮುಂದುವರಿಸಿದ್ದರು. ಅವರ ಕೈಗೆ ಆಗಿರುವ ಗಾಯ ಗಂಭೀರವಾಗಿಲ್ಲವೆಂದು ನಮಗೆ ಮನವರಿಕೆಯಾಗಿದೆ. ಆದರೆ, ಅವರಿಗೆ ಹಳೆಯ ಮಂಡಿರಜ್ಜು ಸಮಸ್ಯೆ ಮರುಕಳಿಸಿದೆ. ಅವರು ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಲಭ್ಯವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಮಂಡಿರಜ್ಜು ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 4 ವಾರಗಳು ಬೇಕಾಗುತ್ತದೆ. ಹೀಗಾಗಿ ಅವರು ಟೆಸ್ಟ್ ಸರಣಿಯಿಂದಲೇ ಹೊರಗುಳಿದಿದ್ದಾರೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.